ಟುರಾ (ಮೇಘಾಲಯ): ಕೊರೊನಾ ಭೀತಿಯಿಂದ ದೇಶವ್ಯಾಪಿ ಲಾಕ್ಡೌನ್ ಆಗಿದ್ದರೂ ಸಹ ಸುಮಾರು 25 ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯ ಅಸ್ಸಾಂಗೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದರು. ಈ ವೇಳೆ ಮೇಘಾಲಯದ ಉತ್ತರ ಗಾರೋಹಿಲ್ಸ್ ಜಿಲ್ಲೆಯ ಚೆಕ್ಗೇಟ್ ಬಳಿ ಅವರನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಉತ್ತರ ಗಾರೋಹಿಲ್ಸ್ ಪೊಲೀಸ್ ಮುಖ್ಯಸ್ಥ ಅಬ್ರಹಾಂ.ಟಿ ಸಂಗ್ಮಾ, ವಲಸೆ ಕಾರ್ಮಿಕರು ಅಸ್ಸಾಂನ ಗೋಲ್ಪಾರ ಜಿಲ್ಲೆಯವರು ಎಂದು ತಿಳಿದುಬಂದಿದೆ. ಕಾಲ್ನಡಿಗೆ ಮೂಲಕ ಬರುವಾಗ ಅನೇಕ ಚೆಕ್ಗೇಟ್ಗಳನ್ನು ತಪ್ಪಿಸಲು ಆಂತರಿಕ ಮಾರ್ಗಗಳು ಹಾಗೂ ಕಾಡುದಾರಿಯ ಮೂಲಕ ಬಂದಿದ್ದಾರೆ. ಆದರೆ ಡೈನಾಡುಬಿ ಚೆಕ್ ಗೇಟ್‌ನಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದು ಅವರನ್ನು ಬಂಧಿಸಲಾಗಿದೆ. ಸದ್ಯ ಅವರನ್ನು ಪರಿಹಾರ ಶಿಬಿರಕ್ಕೆ ಕರೆದೊಯ್ದು ಆಹಾರ ಮತ್ತು ಆಶ್ರಯ ನೀಡಲಾಗಿದೆ. ರಾಜ್ಯಗಳ ನಡುವೆ ಜನ ಸಂಪರ್ಕ ಸರಾಗವಾಗಿ ನಡೆಯುವವರೆಗೂ ಇವರು ಇಲ್ಲೇ ವಾಸಿಸುತ್ತಾರೆ ಎಂದು ಹೇಳಿದರು.
ಈಗಾಗಲೇ ಇಂತಹ ಅನೇಕ ಕಾರ್ಮಿಕರನ್ನು ಪಶ್ಚಿಮ ಖಾಸಿ ಹಿಲ್ಸ್ ಮತ್ತು ಉತ್ತರ ಗಾರೋಹಿಲ್ಸ್ನಲ್ಲಿ ಪತ್ತೆಹಚ್ಚಲಾಗಿದೆ. ಏಪ್ರಿಲ್ 20ರ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಲ್ಲಿವರೆಗೆ ಪರಿಹಾರ ಶಿಬಿರಗಳಲ್ಲಿ ಆಶ್ರಯ ನೀಡಲಾಗುವುದು ಎಂದು ಉತ್ತರ ಗಾರೋಹಿಲ್ಸ್ ಡೆಪ್ಯೂಟಿ ಕಮಿಷನರ್ ಎಸ್.ಸಿ ಸಾಧು ಹೇಳಿದರು.