ಪಂಜಾಬ್: ಇಂದು ಲಂಡನ್‌ನಿಂದ ಆಗಮಿಸಿದ ವಿಶೇಷ ವಿಮಾನ ನಿಲ್ದಾಣದಲ್ಲಿ ಒಟ್ಟು 242 ಪ್ರಯಾಣಿಕರು ಅಮೃತಸರ ಏರ್ಪೋರ್ಟ್ಗೆ ಬಂದಿಳಿದಿದ್ದಾರೆ.
ಲಂಡನ್‌ನಿಂದ ಭಾರತಕ್ಕೆ ಬಂದ ಪ್ರಯಾಣಿರು ವಿಮಾನ ಹತ್ತುವ ಸ್ವಲ್ಪ ಮುಂಚೆ ಕೊರೊನಾ ಟೆಸ್ಟ್ ಮಾಡಿಸಿದ್ದರೂ ಸಹ ವಿಮಾನದಿಂದ ಇಳಿದ ಮೇಲೂ ಕೋವಿಡ್ ಟೆಸ್ಟ್ಗೆ ಒಳಗಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಲಂಡನ್‌ನಿಂದ ಬಂದ ಈ ವಿಶೇಷ ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಆಗಮಿಸಿದ್ದಾರೆ. ಅವರು ಆರ್‌ಟಿ - ಪಿಸಿಟಿ ಪರೀಕ್ಷೆಗೆ ಒಳಗಾಗಬೇಕಾಗಿದ್ದು, ಈ ಟೆಸ್ಟ್ 6-8 ಗಂಟೆ ತೆಗೆದುಕೊಳ್ಳುವುದರಿಂದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಇರಬೇಕಾಗುತ್ತದೆ ಎಂದು ಅಮೃತಸರ ಏರ್ಪೋರ್ಟ್ನ ಅಧಿಕಾರಿ ದೀಪಕ್ ಭಾಟಿಯಾ ತಿಳಿಸಿದ್ದಾರೆ. ಹೀಗಾಗಿ ತಮ್ಮವರನ್ನು ಕರೆದೊಯ್ಯಲು ಬಂದ ಜನರು ಕೂಡ ವಿಮಾನ ನಿಲ್ದಾಣದ ಬಳಿಯೇ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಎದುರಾಗಿದೆ. ಅಮೃತಸರ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಜನರು ನೆರೆದಿದ್ದ ದೃಶ್ಯ ಕಂಡು ಬಂತು. ಇದೇ ವೇಳೆ, ಕೆಲವರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆಯೂ ನಡೆದಿದೆ.
ಬ್ರಿಟನ್ನಲ್ಲಿ ಕೊರೊನಾ ವೈರಸ್ ರೂಪಾಂತರವಾಗಿರುವುದು ಪತ್ತೆಯಾಗಿರುವ ಹಿನ್ನೆಲೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ರೂಪಾಂತರವಾದ ಕೊರೊನಾ ಭಾರತಕ್ಕೆ ಹರಡದಂತೆ ತಡೆಯಲು ಬ್ರಿಟನ್ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.