ಮುಂಬೈ: ಇಡೀ ದೇಶದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಮತ್ತೊಂದು ಆತಂಕದ ಸುದ್ದಿ ಹೊರಬಿದ್ದಿದ್ದು, ನೌಕಾಸೇನೆಯ ಸೇವೆಯಲ್ಲಿದ್ದ 21 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೂಡಲೇ ಎಚ್ಚೆತ್ತ ಹಿರಿಯ ಅಧಿಕಾರಿಗಳು ಇವರೆಲ್ಲರನ್ನು ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಏಪ್ರಿಲ್ 7ರಂದು ನೌಕಾದಳದ ಓರ್ವ ಸಿಬ್ಬಂದಿಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿತ್ತು. ಈತನೊಂದಿಗೆ 21 ಮಂದಿಯೂ ಐಎನ್ಎಸ್‌ನ ಬ್ಲಾಕ್‌ನಲ್ಲಿ ತಂಗಿದ್ದರು. ಇವರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕೋವಿಡ್-19 ಪರೀಕ್ಷೆಗೊಳಪಡಿಸಲಾಗಿದೆ. ಬ್ಲಾಕ್‌ಅನ್ನು ಕ್ವಾರಂಟೈನ್ ಮಾಡಲಾಗಿದೆ.
ಸೇನೆಯಲ್ಲಿ ಕೋವಿಡ್-19 ಪ್ರೊಟೋಕಾಲ್‌ಅನ್ನು ಪಾಲಿಸಲಾಗಿದ್ದು, ಹಡಗು ಮತ್ತು ಸಬ್‌ಮರಿನ್‌ಗಳಲ್ಲಿ ಯಾವುದೇ ರೀತಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ದೇಶಾದ್ಯಂತ ಮಹಾಮಾರಿ ಕೋವಿಡ್ ಸೋಂಕನ್ನು ತಡೆಗಟ್ಟಲು ಕೇಂದ್ರ ಸರ್ಕಾರದ ಹೋರಾಟಕ್ಕೆ ಭಾರತೀಯ ನೌಕಾಸೇನೆಯೂ ಕೈ ಜೋಡಿಸುತ್ತಲೇ ಬಂದಿದೆ.