ರಾಯಪುರ: ರೈಲು ಬರುವುದಿಲ್ಲ ಎಂದು ನಿರ್ಲಕ್ಷ್ಯ ತಾಳಿದವರ ಪಾಲಿಗೆ ಅದೇ ಮರಣ ಶಾಸನವಾಗಿದೆ. ಹಳಿಗಳ ಮೇಲೆಯೇ ಕೂತು ಊಟ ಸೇವಿಸುತ್ತಿದ್ದ ಯುವಕರಿಬ್ಬರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಛತ್ತೀಸ್ಗಢದ ಕೊರಿಯನ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಕಾಲೇಶ್ವರ್ ರಾಜ್ವಾಡೆ (21), ಗುಲಾಬ್ ರಾಜ್ವಾಡೆ (20) ಮೃತರು. ಕೊರೊನಾ ನಿಯಂತ್ರಿಸುವ ಸಲುವಾಗಿ ಲಾಕ್ಡೌನ್ ಹೇರಿದ ಪರಿಣಾಮ ದೇಶವೇ ಸ್ತಬ್ದಗೊಂಡಿದೆ. ಹೀಗಾಗಿ, ಸಾರಿಗೆ ಸೌಲಭ್ಯದ ಅನುಪಸ್ಥಿತಿಯಲ್ಲಿ ನಾಲ್ವರು ದಿನಗೂಲಿ ಕಾರ್ಮಿಕರು, ಸೂರಜ್ಪುರ ಜಿಲ್ಲೆಯ ತವರೂರಿಗೆ ಕಾಲ್ನಡಿಗೆ ಮೂಲಕ ತೆರಳಿದ್ದಾರೆ ಎಂದು ಪೊಲೀಸ್ ಹೇಳಿದರು.
ಈ ನಿಟ್ಟಿನಲ್ಲಿ ಸೋಮವಾರ ರಾತ್ರಿ ಪೆಂಡ್ರಾ ಜಿಲ್ಲೆಯಿಂದ ಕಾಲ್ನಡಿಗೆ ಆರಂಭಿಸಿದ ಅವರು, ರೈಲ್ವೆ ಹಳಿ ಮೂಲಕ 80 ಕಿ.ಮೀ. ದೂರದ ಕೊರಿಯನ್ ಜಿಲ್ಲೆ ತಲುಪಿದ್ದಾರೆ. ನಾಲ್ವರಲ್ಲಿ ಇಬ್ಬರು ನೀರು ತರಲು ಹೋದರು. ಮತ್ತಿಬ್ಬರು ಉದಲ್ಕರ್-ದರಿಟೋಲ ಸ್ಟೇಷನ್ ನಡುವೆ ರೈಲ್ವೆ ಹಳಿ ಮೇಲೆ ಕೂತು ಊಟ ಮಾಡುತ್ತಿದ್ದರು.
ಆ ಸಮಯದಲ್ಲಿ ವೇಗವಾಗಿ ಬಂದ ಗೂಡ್ಸ್ ರೈಲು, ಅವರಿಗೆ ಡಿಕ್ಕಿ ಹೊಡೆದಿದೆ. ಊಟ ಸೇವಿಸುತ್ತಿದ್ದ ಸ್ಥಳ ತಿರುವಿರುವ ಕಾರಣ ಅವರು ಗಮನಿಸಲಿಲ್ಲ ಎನ್ನಲಾಗಿದೆ. ಉಳಿದಿಬ್ಬರು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಭೂಪೇಶ್ ಬಾಗ್ಲೆ ಅವರು ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಹಾಯ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.