ನವದೆಹಲಿ: ಇತ್ತೀಚೆಗಷ್ಟೇ ತೆಲುಗು ದೇಶಂ ಪಕ್ಷ ತ್ಯಜಿಸಿ ಬಿಜೆಪಿ ತೆಕ್ಕೆಗೆ ಜಾರಿದ ನಾಲ್ವರು ಸಂಸದರಲ್ಲಿ ಇಬ್ಬರು ಕೇಂದ್ರದ ಪ್ರಮುಖ ತನಿಖಾ ಸಂಸ್ಥೆಗಳ ತನಿಖೆ ಎದುರಿಸುತ್ತಿದ್ದ ವಿಚಾರ ಇದೀಗ ಬಯಲಾಗಿದೆ. ಹಾಗಾಗಿ ಕೇಂದ್ರ ಸರ್ಕಾರದಿಂದ ಭವಿಷ್ಯದಲ್ಲಿ ಉಂಟಾಗುವ ತೊಂದರೆಗಳಿಂದ ಪಾರಾಗಲು ಈ ಇಬ್ಬರು ನಾಯಕರು ಕೇಸರಿ ಪಕ್ಷಕ್ಕೆ ಹಾರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರಾಷ್ಟ್ರಮಟ್ಟದ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಟಿಡಿಪಿ ಸಂಸದ ವೈ ಎಸ್ ಚೌಧರಿ, ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿದ್ದರೆ, ಇನ್ನೊಬ್ಬ ಸಂಸದ ಸಿ.ಎಂ ರಮೇಶ್ ಹೆಸರು ಈ ಹಿಂದೆ ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನಾ ಅಧಿಕಾರಾವಧಿಯಲ್ಲಿ ಜೋರಾಗಿ ಸದ್ದು ಮಾಡಿತ್ತು. ಇದರ ಹೊರತಾಗಿ ರಮೇಶ್ ಒಡೆತನದ ಕಂಪನಿಯೊಂದು ಐಟಿ ಇಲಾಖೆ ತನಿಖೆಗೆ ಒಳಪಟ್ಟಿತ್ತು. ಈ ಇಬ್ಬರೂ ಟಿಡಿಪಿ ನಾಯಕರು ದೊಡ್ಡ ಪ್ರಮಾಣದ ಖಾಸಗಿ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ.
ಈ ಇಬ್ಬರನ್ನು ಕಳೆದ ವರ್ಷ ಆಂಧ್ರ ಪ್ರದೇಶದ ಬಿಜೆಪಿ ನಾಯಕ ಮತ್ತು ವಕ್ತಾರ ಜಿ.ವಿಎಲ್ ನರಸಿಂಹ ರಾವ್, 'ಆಂಧ್ರ ಮಲ್ಯರು' ಎಂದು ಕರೆದಿದ್ದರು. ಈ ಸದಸ್ಯರುಗಳ ವಿರುದ್ಧ ಕ್ರಮ ಜರುಗಿಸುವಂತೆ ಅವರು ರಾಜ್ಯಸಭೆಯ ನೀತಿ ಸಮಿತಿಗೆ ಪತ್ರವನ್ನೂ ಬರೆದಿದ್ದರು.
ಈ ಇಬ್ಬರೂ ಮುಖಂಡರು ಅಕ್ರಮವಾಗಿ ಸಾಕಷ್ಟು ಸಂಪತ್ತು ಹೊಂದಿದ್ದು, ಅನೇಕ ಹಣಕಾಸು ಹಗರಣಗಳನ್ನೂ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಸದ ರಮೇಶ್ ಅವರ ಆಂಧ್ರದ ಕಡಪಾದಲ್ಲಿರುವ ಕಂಪನಿ, ಕಚೇರಿ ಮತ್ತು ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ತಮ್ಮ ಪಕ್ಷದ ನಾಯಕರನ್ನು ಕೇಂದ್ರ ಟಾರ್ಗೆಟ್ ಮಾಡುತ್ತಿದೆ ಎಂದು ಟಿಡಿಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಜೊತೆಗೆ ಐಟಿ ಅಧಿಕಾರಿಗಳು ರಮೇಶ್ ಅವರಿಗೆ ಸೇರಿದ ರಿತ್ವಿಕ್ ಪ್ರಾಜೆಕ್ಟ್ ಪ್ರೈ. ಲಿ. ಕಂಪನಿಯಲ್ಲಿ ನಡೆದಿದೆ ಎನ್ನಲಾದ 100 ಕೋಟಿ ರೂ ಅಕ್ರಮ ಹಣಕಾಸು ಅವ್ಯವಹಾರವನ್ನೂ ಪತ್ತೆ ಮಾಡಿದ್ದರು.
ಚಂದ್ರಬಾಬು ನೇತೃತ್ವದ ಟಿಡಿಪಿ ಎನ್‌ಡಿಎ ಭಾಗವಾಗಿದ್ದ ವೇಳೆ ವೈಎಸ್ ಚೌಧರಿ ಕೇಂದ್ರ ಸರ್ಕಾರದಲ್ಲಿ ರಾಜ್ಯ ಸಚಿವರೂ ಆಗಿದ್ದರು. ಇವರೂ ಕೂಡಾ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ನಿಂದ ತನಿಖೆ ಎದುರಿಸುತ್ತಿದ್ದಾರೆ. ಈ ಮೂರು ಪ್ರಕರಣಗಳು ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಕಂಪನಿಗಳಾದ ಬೆಸ್ಟ್ ಮತ್ತು ಕ್ರಾಮ್ಟನ್ ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ ಲಿ. ಸಂಸ್ಥೆಗಳಿಗೆ ಸೇರಿದ್ದು, ಈ ಕಂಪನಿಗಳ ಜೊತೆಗೆ ಚೌಧರಿ ಸಂಬಂಧ ಹೊಂದಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲ, ಚೌಧರಿ ವಿವಿಧ ಬ್ಯಾಂಕುಗಳಿಂದ ಅಕ್ರಮ ದಾರಿಯ ಮೂಲಕ 360 ಕೋಟಿ ರೂಪಾಯಿ ಸಾಲ ಪಡೆದಿರುವುದನ್ನೂ ಸಿಬಿಐ ಪತ್ತೆ ಮಾಡಿತ್ತು. ಈ ಕಂಪನಿಗಳು ಇನ್ನೂ ಈ ಸಾಲವನ್ನು ಮರುಪಾವತಿ ಮಾಡಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಇನ್ನೊಂದೆಡೆ ಜಾರಿ ನಿರ್ದೇಶನಾಲಯ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 325 ಕೋಟಿಗೂ ಹೆಚ್ಚು ಮೊತ್ತದ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಿತ್ತು. ಇವುಗಳನ್ನು ದುಬಾರಿ ಬೆಲೆಯ ಅನೇಕ ಕಾರುಗಳೂ ಸೇರಿದ್ದವು.
ತನಿಖೆಯ ವೇಳೆ ಈ ಇಬ್ಬರೂ ತಮ್ಮ ಮೇಲೆ ಕೇಳಿ ಬಂದಿದ್ದ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ್ದರು.
ಇದೀಗ ಈ ಇಬ್ಬರೂ ನಾಯಕರು ಟಿಡಿಪಿ ಪಕ್ಷ ಬಿಟ್ಟು ಅಮಿತ್ ಷಾ ಮುಂದೆ ಬಿಜೆಪಿ ಸೇರಿಕೊಂಡಿರುವುದು ವಿಶೇಷ ರಾಜಕೀಯ ಬೆಳವಣಿಗೆಯಾಗಿದೆ.