ನವದೆಹಲಿ: ದೆಹಲಿಯ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ವಿವಾದಿತ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ಸಿಸೋಡಿಯಾ ಅವರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿವೆ. ಇದರಿಂದ ತಮ್ಮ ಪತ್ನಿಯ ಚಿಕಿತ್ಸೆಗೂ ಅವರ ಬಳಿ ಹಣವಿಲ್ಲ ಮೂಲಗಳು ತಿಳಿಸಿವೆ.
ಆಮ್ ಆದ್ಮಿ ಪಕ್ಷದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಂತರ ಎರಡನೇ ಉನ್ನತ ನಾಯಕ ಎಂದೇ ಗುರುತಿಸಿಕೊಂಡಿರುವ ಮನೀಶ್ ಸಿಸೋಡಿಯಾ ಒಂದು ಕಾಲದಲ್ಲಿ ದೆಹಲಿ ಸರ್ಕಾರದಲ್ಲಿ 18 ಸಚಿವಾಲಯಗಳ ಖಾತೆಗಳನ್ನು ಹೊಂದಿದ್ದರು. ಆದರೆ, ಇದೀಗ ಅವರ ಪತ್ನಿಯ ಚಿಕಿತ್ಸೆ ಮತ್ತು ಮನೆಯ ಖರ್ಚಿಗೂ ಸಹ ಹಣವಿಲ್ಲ. ಆಪಾದಿತ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಸೋಡಿಯಾ ಅವರ ಬ್ಯಾಂಕ್ ಖಾತೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಸ್ಥಗಿತಗೊಳಿಸಿರುವುದೇ ಇದಕ್ಕೆ ಕಾರಣ. ಸಿಸೋಡಿಯಾ ತಮ್ಮ ಮನೆಯ ವೆಚ್ಚಕ್ಕಾಗಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯ ಚಿಕಿತ್ಸೆಗಾಗಿ ತಮ್ಮ ಸ್ವಂತ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು ನ್ಯಾಯಾಲಯದ ಆದೇಶದ ಮೇಲೆ ಅವಲಂಬಿತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಕಳೆದ ಐದು ತಿಂಗಳಿನಿಂದ ದೆಹಲಿಯ ತಿಹಾರ್ ಜೈಲಿನಲ್ಲಿರುವ ಸಿಸೋಡಿಯಾ, ಜುಲೈ 31ರಂದು ರೂಸ್ ಅವೆನ್ಯೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ತಮ್ಮ ಬ್ಯಾಂಕ್ ಖಾತೆಯಿಂದ ಎಷ್ಟು ಹಣವನ್ನು ಹಿಂಪಡೆಯಬಹುದು ಎಂಬುದನ್ನು ನ್ಯಾಯಾಲಯವೇ ನಿರ್ಧರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಏಪ್ರಿಲ್‌ನಲ್ಲಿ ಸಿಸೋಡಿಯಾ ಅವರ ಪತ್ನಿಯ ಚಿಕಿತ್ಸೆ ಮತ್ತು ಮನೆಯ ವೆಚ್ಚಕ್ಕಾಗಿ ಬ್ಯಾಂಕ್‌ನಿಂದ ನಿರ್ದಿಷ್ಟ ಮೊತ್ತವನ್ನು ಹಿಂಪಡೆಯಲು ನ್ಯಾಯಾಲಯ ಅನುಮತಿ ನೀಡಿತ್ತು. ನ್ಯಾಯಾಲಯದಿಂದ ಲಿಖಿತ ಆದೇಶವಿಲ್ಲದೆ ತನ್ನ ಗ್ರಾಹಕರು ವೈದ್ಯಕೀಯ ಮತ್ತು ಇತರ ಅಗತ್ಯಗಳಿಗೆ ಅಗತ್ಯವಿರುವ ಹಣವನ್ನು ಹಿಂಪಡೆಯಲು ಬ್ಯಾಂಕ್ ಅನುಮತಿ ನೀಡುತ್ತಿಲ್ಲ ಎಂದು ಸಿಸೋಡಿಯಾ ಪರ ವಕೀಲ ಮೊಹಮ್ಮದ್ ಇರ್ಷಾದ್ ಹೇಳಿದ್ದಾರೆ.
ಮತ್ತೊಂದೆಡೆ, ತಾತ್ಕಾಲಿಕವಾಗಿ ವೈದ್ಯಕೀಯ ಜಾಮೀನು ಕೋರಿ ಸಿಸೋಡಿಯಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಸೆಪ್ಟೆಂಬರ್ 4ಕ್ಕೆ ಮುಂದೂಡಿದೆ. ಸಿಸೋಡಿಯಾ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠದ ಮುಂದೆ ವಾದ ಮಂಡಿಸಿ, ಮಾನವೀಯ ಆಧಾರದ ಮೇಲೆ ತನ್ನ ಕಕ್ಷಿದಾರರಿಗೆ ಮಧ್ಯಂತರ ಜಾಮೀನು ನೀಡಬೇಕು. ಸಿಸೋಡಿಯಾ ಅವರು ತಮ್ಮ ಅನಾರೋಗ್ಯದ ಪತ್ನಿಯನ್ನು ಭೇಟಿ ಮಾಡಲು ಬಯಸುತ್ತಾರೆ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಅಬಕಾರಿ ನೀತಿ ಮದ್ಯ ಹಗರಣ : ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಮನೀಶ್ ಸಿಸೋಡಿಯಾ