ಲಖನೌ: ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮುಂದಿನ 72 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ನಿಗಾವಹಿಸಲಾಗುವುದು ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಹೇಳಿದ್ದಾರೆ. ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ.
ಮೆದಾಂತ ಆಸ್ಪತ್ರೆಯ ನಿರ್ದೇಶಕ ರಾಕೇಶ್ ಕಪೂರ್ ಈ ಬಗ್ಗೆ ಮಾಹಿತಿ ನೀಡಿದ್ದು, " ಅಜಂಖಾನ್ ಅವರಿಗೆ ಈಗ ಆಮ್ಲಜನಕದ ಅವಶ್ಯಕತೆ ಅಷ್ಟೇನೂ ಇಲ್ಲ, ಆದರೆ, ಕಾಯಿಲೆಯ ತೀವ್ರತೆ ಮುಂದುವರೆದಿದೆ. ಅವರು ಐಸಿಯುನಲ್ಲಿದ್ದಾರೆ ಮತ್ತು ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸೀತಾಪುರ ಜೈಲಿನಲ್ಲಿರುವ ಅಜಂಖಾನ್ ಈ ತಿಂಗಳ ಆರಂಭದಲ್ಲಿ ಕೋವಿಡ್ ಪಾಸಿಟಿವ್ ದೃಢವಾಗಿತ್ತು. ಉಸಿರಾಟದ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಮೆದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪುತ್ರ ಅಬ್ದುಲ್ಲಾ ಆಜಂಗೆ ಕೂಡ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅವರ ಸ್ಥಿತಿ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.