ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯ ಅಂಗವಾಗಿ ರಾಜಧಾನಿಯಲ್ಲಿರುವ ಸದೈವ್ ಅಟಲ್ ಸ್ಮಾರಕ ಉದ್ಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧನಕರ್ ಮತ್ತು ಇತರ ಪ್ರಮುಖ ನಾಯಕರು ಇಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಮೂವರು ಪ್ರಮುಖ ನಾಯಕರು ದಿವಂಗತ ನಾಯಕನಿಗೆ ಪುಷ್ಪ ನಮನ ಸಲ್ಲಿಸುತ್ತಿರುವ ವೀಡಿಯೋ ಆನ್‌ಲೈನ್‌ನಲ್ಲಿ ಪ್ರಸಾರಗೊಂಡಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಲೋಕಸಭಾ ಸ್ಪೀಕರ್ ಓಮ್ ಬಿರ್ಲಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ವಾಜಪೇಯಿ ಅವರ ಸಾಕು ಮಗಳು ನಮಿತಾ ಕೌಲ್ ಭಟ್ಟಾಚಾರ್ಯ ಸೇರಿದಂತೆ ಇತರರು ಸಹ ಅವರಿಗೆ ಶ್ರದ್ಧಾಂಜಲಿ ಸಮ್ಮಿಸಿದರು.
ವಾಜಪೇಯಿ ಅವರು ಮೂರು ಬಾರಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 1996 ರಲ್ಲಿ, ಮತ್ತು ನಂತರ 1998 ಮತ್ತು 2004 ರ ನಡುವೆ ಎರಡು ಅವಧಿಗೆ ಪ್ರಧಾನಮಂತ್ರಿಯಾಗಿದ್ದರು. ದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾದ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸ್ಥಾಪಕ ಸದಸ್ಯರಾಗಿದ್ದ ವಾಜಪೇಯಿ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ನಲ್ಲಿ ಆಗಸ್ಟ್ 16, 2018 ರಂದು ನಿಧನರಾಗಿದ್ದರು. ಆಗ ಅವರಿಗೆ 93 ವರ್ಷ ವಯಸ್ಸಾಗಿತ್ತು.
ಇದನ್ನೂ ಓದಿ : ಯುದ್ಧಭೂಮಿ ಸಿಯಾಚಿನ್ನಲ್ಲಿ ತ್ರಿವರ್ಣ ಹಾರಿಸಿದ ಸೈನಿಕರು