ಗುವಾಹಟಿ(ಅಸ್ಸೋಂ): ಛತ್ತೀಸ್ಗಢದಲ್ಲಿ ನಡೆದ ನಕ್ಸಲ್ ದಾಳಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬರಹಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಿಖಾ ಶರ್ಮಾ ಅವರನ್ನು ದಿಸ್ಪುರ್ ಪೊಲೀಸರು ಬಂಧಿಸಿದ್ದಾರೆ.
ದಾಳಿಯಲ್ಲಿ ಒಟ್ಟು 22 ಕೋಬ್ರಾ ಪೊಲೀಸರು ಹುತಾತ್ಮರಾಗಿದ್ದರು. ಇದರಲ್ಲಿ ಅಸ್ಸೋಂ ಮೂಲದವರಾದ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಹಾಗೂ ಪೇದೆ ಬಾಬುಲ್ ರಭಾ ವೀರ ಮರಣವನ್ನಪ್ಪಿದ್ದರು. ಶಿಖಾ ಶರ್ಮಾ ಈ ಬಗ್ಗೆ ಸೋಮವಾರ ಫೇಸ್ಬುಕ್ನಲ್ಲಿ ಕಮೆಂಟ್ ಮಾಡಿದ್ದರು. ಸಂಬಳಕ್ಕಾಗಿ ದುಡಿಯುವವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರು ಹುತಾತ್ಮರಾಗಿಲ್ಲ ಎಂದು ಹೇಳಿದ್ದರು.
ಅವರ ಈ ಹೇಳಿಕೆ ಅಸ್ಸೋಂನಲ್ಲಿ ಭಾರಿ ಸದ್ದು ಮಾಡಿತ್ತು. ಲೇಖಕಿಯ ಫೇಸ್ಬುಕ್ ಪೋಸ್ಟ್ಗಳನ್ನ ಆಧರಿಸಿ ವಕೀಲರಾದ ಉಮಿ ದೆಕಾ ಬರುವಾ ಮತ್ತು ಕಂಗಕನಾ ಗೋಸ್ವಾಮಿ, ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ದಿಸ್ಪುರ್ ಪೊಲೀಸರು ಈ ಸಂಬಂಧ ಎಫ್ಐಆರ್ ದಾಖಲಿಸಿ, 48 ವರ್ಷದ ಬರಹಗಾರ್ತಿಯನ್ನ ಬಂಧಿಸಿದ್ದಾರೆ. ಅಷ್ಟೇ ಅಲ್ಲ ಐಪಿಸಿ ಸೆಕ್ಷನ್ 124 ಎ ಅನ್ವಯ ದೇಶದ್ರೋಹದ ಆರೋಪದ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಯೋಧರು ದಾಳಿಗೊಳಗಾದಾಗ, ಅಮಿತ್ ಶಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ರು: ಸುರ್ಜೇವಾಲಾ
ಕಳೆದ ಕೆಲ ದಿನಗಳ ಹಿಂದೆ ಛತ್ತೀಸ್ಗಢದ ಬಿಜಾಪುರ-ಸುಕ್ಮಾ ಗಡಿಯಲ್ಲಿ ಕೋಬ್ರಾ ಪಡೆ ಹಾಗೂ ನಕ್ಸಲರ ನಡುವೆ ನಡೆದಿದ್ದ ಗುಂಡಿನ ಕಾಳಗದಲ್ಲಿ 22 ಯೋಧರು ಹುತಾತ್ಮರಾಗಿ, ಅನೇಕರು ಗಾಯಗೊಂಡಿದ್ದರು.