ದಿಫು (ಅಸ್ಸೋಂ) : ಸಿಎಂ ಹಿಮಂತ ಬಿಸ್ವಾ ಶರ್ಮಾರ ಹತ್ಯೆಗೈಯ್ಯಲು ಒತ್ತಡ ಹೇರಿದ್ದ ದುಷ್ಕರ್ಮಿಗಳಿಂದ ರಕ್ಷಣೆಗಾಗಿ ಅಂಗಲಾಚಿದ್ದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ. ಅಸ್ಸೋಂ-ನಾಗಲ್ಯಾಂಡ್ ಗಡಿಯ ಖಟ್ಖಾಟಿ ಪ್ರದೇಶದ ಹೋಟೆಲ್ನಿಂದ ಲಖಿಂಪುರ ಖೇರಿ ಮೂಲದ ಶರತ್ ದಾಸ್ ಎಂಬ ಯುವಕನನ್ನು ಕರ್ಬಿ ಆಂಗ್ಲಾಂಗ್ ಪೊಲೀಸರು ರಕ್ಷಿಸಿದ್ದಾರೆ.
ದುಷ್ಕರ್ಮಿಗಳು ನನ್ನನ್ನು ಕಿಡ್ನಾಪ್ ಮಾಡಿದ್ದು, ಸಿಎಂ ಬಿಸ್ವಾ ಶರ್ಮಾರನ್ನು ಕೊಲೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ದಯವಿಟ್ಟು ನನ್ನನ್ನು ರಕ್ಷಿಸಿ ಎಂದು ಮನವಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ವೈರಲ್ ವಿಡಿಯೋ ಆಧರಿಸಿ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಯುವಕನ ಆರೋಪ ನಿಜವೇ ಎಂದು ತಿಳಿದುಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಡಿಯೋದಲ್ಲಿ, ಅಸ್ಸೋಂ ಜನರೇ ಜಾಗೃತರಾಗಿರಿ. ಮೂರು ಗುಂಡುಗಳನ್ನು ಹೊಂದಿರುವ ಪಿಸ್ತೂಲ್ ನೀಡಿ ನನಗೆ ಮಾಮಾ(ಅಸ್ಸೋಂನಲ್ಲಿ ಸಿಎಂ ಹಿಮಂತ ಬಿಸ್ವಾ ಶರ್ಮಾರನ್ನು ಹೀಗೆ ಕರೆಯುತ್ತಾರೆ)ನನ್ನು ಕೊಲ್ಲಲು ಹೇಳಿದ್ರು ಎಂದು ಯುವಕ ಹೇಳಿದ್ದಾನೆ.
ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ ಕೇಸ್.. NCBಯಿಂದ ಮತ್ತೊಬ್ಬ ವಿದೇಶಿ ಪ್ರಜೆ ಬಂಧನ..
ದಾಸ್, ವಿಡಿಯೋದಲ್ಲಿ ಪಿಸ್ತೂಲ್ ಹಿಡಿದು ಗದ್ಗದಿತರಾಗಿದ್ದು, ಪೊಲೀಸರ ಸಹಾಯ ಕೋರಿದ್ದಾರೆ. ಈ ವಿಡಿಯೋ ಆರೋಪಿಗಳಿಗೆ ತಲುಪಿದರೆ, ಅವರು ನನ್ನನ್ನು ಕೊಲ್ಲುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಅಪಹರಣಾಕಾರರು ನನ್ನ ದಾಖಲೆಗಳ ಜತೆಗೆ ಮೂರು ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.