ನವದೆಹಲಿ: ತಮ್ಮ ಪಕ್ಷದ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯ ಬಗ್ಗೆ ಕೇಂದ್ರೀಯ ತನಿಖಾ ದಳದಿಂದ ತನಿಖೆಗೆ ಶಿಫಾರಸು ಮಾಡಿದ ಕೆಲವೇ ಗಂಟೆಗಳ ನಂತರ ಕೇಜ್ರಿವಾಲ್ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬಿಐ ತನಿಖೆಯ ಆದೇಶದ ನಂತರ ತಮ್ಮ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಅಬಕಾರಿ ಖಾತೆ ಹೊಂದಿರುವ ಮನೀಷ್ ಸಿಸೋಡಿಯಾ ಅವರ ರಕ್ಷಣೆಗಾಗಿ ಅರವಿಂದ್ ಕೇಜ್ರಿವಾಲ್ ಪ್ರಯತ್ನ ಆರಂಭಿಸಿದ್ದಾರೆ.
ಸಿಸೋಡಿಯಾ ಜೈಲಿಗಟ್ಟಲು ಕೇಂದ್ರದ ಹುನ್ನಾರ: ಕೇಂದ್ರ ಸರ್ಕಾರವು ಮನೀಷ್ ಸಿಸೋಡಿಯಾರನ್ನು ಜೈಲಿಗಟ್ಟಲು ಬಯಸುತ್ತಿದೆ. ಅವರ ವಿರುದ್ಧ ಹೊರಿಸಲಾದ ಎಲ್ಲ ಆರೋಪಗಳು ನಿರಾಧಾರ. ಪ್ರಥಮ ಬಾರಿಗೆ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗ ಸರ್ಕಾರಿ ಶಾಲೆಗಳ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಆದರೆ, ಆಗ ಶಿಕ್ಷಣ ಸಚಿವರಾಗಿದ್ದ ಸಿಸೋಡಿಯಾ ಹಗಲು-ರಾತ್ರಿ ಕೆಲಸ ಮಾಡಿ ಸರ್ಕಾರಿ ಶಾಲೆಗಳ ಶಾಲೆಯನ್ನು ತುಂಬಾ ಸುಧಾರಿಸಿದ್ದರು ಎಂದು ಕೇಜ್ರಿವಾಲ್ ಹೇಳಿದರು.
ಆಮ್ ಆದ್ಮಿ ಪಕ್ಷಕ್ಕೆ ಜೈಲಿನ ಭಯವಿಲ್ಲ. ಬ್ರಿಟಿಷರ ಎದುರು ತಲೆಬಾಗಲು ನಿರಾಕರಿಸಿ ಗಲ್ಲಿಗೇರಿದ ಭಗತ್ ಸಿಂಗ್ ನಮ್ಮ ಆದರ್ಶ ವ್ಯಕ್ತಿ. ಎಷ್ಟೋ ಬಾರಿ ಜೈಲು ಕಂಡು ಬಂದಿರುವ ನಮಗೆ ಯಾವುದೇ ಭಯವಿಲ್ಲ ಎಂದು ಅವರು ತಿಳಿಸಿದರು.
ಈ ಜನ ನಮ್ಮ ಹಿಂದೆ ಬಿದ್ದಿರುವುದೇಕೆ?: ಈ ಜನ ನಮ್ಮ ಹಿಂದೆ ಬಿದ್ದಿರುವುದೇಕೆಂದು ಅರ್ಥವಾಗುತ್ತಿಲ್ಲ. ನಮ್ಮ ಅದೆಷ್ಟೋ ಶಾಸಕರನ್ನು ಇವರು ಜೈಲಿಗೆ ಕಳುಹಿಸಿದ್ದರೂ ಅವರೆಲ್ಲರೂ ಬಿಡುಗಡೆಯಾಗಿ ಬಂದಿದ್ದಾರೆ. ಸತ್ಯೇಂದ್ರ ಜೈನ್ ಅವರನ್ನು ಬಂಧನದಲ್ಲಿಟ್ಟಿದ್ದಾರೆ. ಈಗ ಮನೀಷ್ ಸಿಸೋಡಿಯಾರನ್ನು ಬಂಧಿಸಲು ಯತ್ನಿಸುತ್ತಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡರನ್ನು ಬಂಧಿಸಲು ಮೂರು ಕಾರಣಗಳಿವೆ. ನಮ್ಮ ಪಕ್ಷದ ಮುಖಂಡರು ಪ್ರಾಮಾಣಿಕರಾಗಿರುವುದು ಮೊದಲ ಕಾರಣ. ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಗೆದ್ದ ನಂತರ ಇಡೀ ದೇಶದಲ್ಲಿ ಪಕ್ಷದ ಬಗ್ಗೆ ಚರ್ಚೆಯಾಗುತ್ತಿರುವುದು ಎರಡನೇ ಕಾರಣ. ಮೂರನೆಯದಾಗಿ, ದೆಹಲಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಇವರು ತಡೆಗಟ್ಟಲು ಬಯಸುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದರು.
ಇದನ್ನು ಓದಿ: ಅಮರನಾಥ ಯಾತ್ರೆ ಭಕ್ತರಿಗೆ ಕೃತಕ ಆಮ್ಲಜನಕ ಒದಗಿಸಿದ ಐಟಿಬಿಪಿ ಸೈನಿಕರು!