ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್‌ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕರು ಇಂದು ಪಂಜಾಬ್ ಪ್ರವಾಸದಲ್ಲಿದ್ದಾರೆ.
ಪ್ರವಾಸದ ವೇಳೆ ಮಾತನಾಡಿದ ಕೇಜ್ರಿವಾಲ್, ಪಂಜಾಬ್ನಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ಚರಣ್‌ಜಿತ್ ಸಿಂಗ್ ಚನ್ನಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಗೆ ಭದ್ರತೆ ಲೋಪ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಬಾಂಬ್ ಸ್ಫೋಟ, ಹತ್ಯಾಕಾಂಡದ ಘಟನೆಗಳು, ಆತ್ಯಾಚಾರ ಪ್ರಕರಣಗಳು, ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಇದನ್ನು ನಿಭಾಯಿಸುವಲ್ಲಿ ಚನ್ನಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಚುನಾವಣೆಯ ವಿಷಯವಾಗಿ ಮಾತನಾಡಿದ ಅವರು, ಮುಂದಿನ ವಾರ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಾಗುವುದು. ಪಂಜಾಬ್ ವಿಧಾನಸಭಾ ಚುನಾವಣೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಮತ್ತು ಬಾದಲ್ ಕುಟುಂಬಸ್ಥರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಈ ಬಾರಿ ಮತದಾರರು ಅವರಿಗೆ ಬುದ್ಧಿ ಕಲಿಸಲಿದ್ದಾರೆ ಎಂದರು.
ಓದಿ: 50ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕಾ ಗಾಂಧಿ: ರಣಥಂಬೋರ್‌ನಲ್ಲಿ ಹುಟ್ಟುಹಬ್ಬ ಆಚರಣೆ