ಚೆನ್ನೈ: ಫೆಡ್‌ಬ್ಯಾಂಕ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಶಾಖೆಯಲ್ಲಿ ಆದ ದರೋಡೆ ಸಂಬಂಧ ಓರ್ವನನ್ನು ಬಂಧಿಸಿದ್ದು, ತನಿಖೆ ತೀವ್ರಗೊಳಿಸಲಾಗಿದೆ.
ಘಟನೆ ವಿವರ: ಅರುಂಬಕ್ಕಂ ರಜಾಕ್ ಗಾರ್ಡನ್ ಪ್ರದೇಶದಲ್ಲಿ ಈ ಶಾಖೆ ಇದ್ದು, ಶನಿವಾರ (ಆ.13) ಮಧ್ಯಾಹ್ನ 2.50ಕ್ಕೆ ಚಿನ್ನಾಭರಣವನ್ನು ಗಿರವಿ ಇಡಲು ಬಂದಿದ್ದ ಇಬ್ಬರು ಗ್ರಾಹಕರು ವಾಶ್‌ರೂಮ್‌ನಿಂದ ಉದ್ಯೋಗಿಗಳ ಕಿರುಚಾಟ ಕೇಳಿದ್ದಾರೆ. ನಂತರ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಮೇರೆಗೆ ಅರುಂಬಕ್ಕಂ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮೂವರು ಉದ್ಯೋಗಿಗಳು ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಇವರನ್ನು ರಕ್ಷಣೆ ಮಾಡಿ ವಿಚಾರಿಸಲಾಗಿ, ಈ ಮೂವರು ಶಾಖಾ ವ್ಯವಸ್ಥಾಪಕ ಸುರೇಶ್, ಉದ್ಯೋಗಿ ರಾಜಲಕ್ಷ್ಮಿ ಮತ್ತು ಭದ್ರತಾ ಸಿಬ್ಬಂದಿ ಸರವಣನ್ ಎಂದು ತಿಳಿದುಬಂದಿದೆ.
ಅದೇ ಕಂಪನಿಯಲ್ಲಿ ಗ್ರಾಹಕ ಸೇವಾ ಕೇಂದ್ರದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಮುರುಗನ್ ಶನಿವಾರ (ಆ.13) ಅನುಮಾನಾಸ್ಪದವಾಗಿ ವರ್ತಿಸಿರುವುದು ಬೆಳಕಿಗೆ ಬಂದಿದೆ. ತಂಪು ಪಾನೀಯ ಖರೀದಿಸಿ ಭದ್ರತಾ ಸಿಬ್ಬಂದಿ ಶರವಣ ಹಾಗೂ ನೌಕರರಿಗೆ ಅವರು ನೀಡಿದ್ದರಂತೆ.
ಮುರುಗನ್ ನೀಡಿದ ಮಾಹಿತಿ ಮೇರೆಗೆ ಮಧ್ಯಾಹ್ನ 2.30ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ಕಂಪನಿಯ ಹಿಂಭಾಗದಿಂದ ಪ್ರವೇಶಿಸಿದ್ದಾರೆ. ನಂತರ ಮುರುಗನ್ ಸೇರಿದಂತೆ ಮೂವರಿಗೆ ಚಾಕು ತೋರಿಸಿ ಬೆದರಿಸಿ ಲಾಕರ್ ನಲ್ಲಿದ್ದ 20 ಕೋಟಿ ಮೌಲ್ಯದ 32 ಕೆಜಿ ಚಿನ್ನಾಭರಣ ಕದ್ದು ಬ್ಯಾಗ್ನಲ್ಲಿ ಹಾಕಿಕೊಂಡು ಪರಾರಿಯಾಗಿರುವುದು ಬೆಳಕಿಗೆ ಬಂದಿತ್ತು.
ಕೇವಲ 15 ನಿಮಿಷದಲ್ಲಿ ಈ ದರೋಡೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಂಪನಿಯಲ್ಲಿ ದಾಖಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಉತ್ತರ ವಲಯ ಹೆಚ್ಚುವರಿ ಆಯುಕ್ತ ಅನ್ಬು ಹಾಗೂ ಅಣ್ಣಾನಗರ ಜಿಲ್ಲಾಧಿಕಾರಿ ವಿಜಯಕುಮಾರ್ ಸ್ಥಳಕ್ಕೆ ಆಗಮಿಸಿ ನೌಕರರ ಕೂಲಂಕಷ ತನಿಖೆ ನಡೆಸಿದರು. ಅಲ್ಲದೆ, ದರೋಡೆಕೋರರ ದಾಖಲೆಗಳನ್ನು ತೆಗೆದುಕೊಳ್ಳಲು ವಿಧಿವಿಜ್ಞಾನ ತಜ್ಞರು ಮತ್ತು ಸ್ನಿಫರ್ ಡಾಗ್ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 4 ವಿಶೇಷ ಪಡೆಗಳನ್ನು ರಚಿಸಲಾಗಿದ್ದು, ಪೊಲೀಸ್ ಇಲಾಖೆ ವಾಹನ ಚೆಕ್ ಪೋಸ್ಟ್ ಸ್ಥಾಪಿಸಿ ತೀವ್ರ ನಿಗಾ ವಹಿಸುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ದರೋಡೆಗೆ ಸಂಬಂಧಿಸಿದಂತೆ ನೌಕರ ಮುರುಗನ್ ಸ್ನೇಹಿತ ಬಾಲಾಜಿಯನ್ನು ವಿಶೇಷ ತಂಡ ಬಂಧಿಸಿ ತನಿಖೆ ನಡೆಸುತ್ತಿದೆ. ಚೆನ್ನೈ ಉತ್ತರ ವಲಯದ ಹೆಚ್ಚುವರಿ ಕಮಿಷನರ್ ಅನ್ಬು ಅವರು ಬಾಲಾಜಿಯನ್ನು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಅರುಂಬಕ್ಕಂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಬಗ್ಗೆ ಸುಳಿವು ನೀಡಿದ ಸಾರ್ವಜನಿಕರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ತಮಿಳುನಾಡು ಪೊಲೀಸ್ ಡಿಜಿಪಿ ಸೈಲೇಂದ್ರ ಬಾಬು ಘೋಷಿಸಿದ್ದಾರೆ.
Fedbank Financial Services Ltd (Fedfina) ವೆಬ್‌ಸೈಟ್ ಪ್ರಕಾರ, ಕಂಪನಿಯು ದೇಶಾದ್ಯಂತ 463 ಶಾಖೆಗಳನ್ನು ಹೊಂದಿದೆ. ಇದು ಚಿನ್ನದ ಸಾಲಗಳು, ಗೃಹ ಸಾಲಗಳು, ಆಸ್ತಿ ಮೇಲಿನ ಸಾಲಗಳನ್ನು ಗ್ರಾಹಕರಿಗೆ ನೀಡುತ್ತದೆ.
ಇದನ್ನೂ ಓದಿ: ಬ್ಯಾಂಕ್ನಲ್ಲಿ ಹಾಡಹಗಲೇ ಭಾರಿ ದರೋಡೆ.. ಸಿಬ್ಬಂದಿ ಕೂಡಿ ಹಾಕಿ 32 ಕೆಜಿ ಚಿನ್ನದೊಂದಿಗೆ ಖದೀಮರು ಎಸ್ಕೇಪ್