ಅಲಿಬಾಗ್ (ಮಹಾರಾಷ್ಟ್ರ): ಒನ್ವಯ್ ನಾಯ್ಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿರುವ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಸ್ಥಳೀಯ ಶಾಲೆಯಲ್ಲಿ ರಾತ್ರಿ ಕಳೆದಿದ್ದಾರೆ. ಈ ಶಾಲೆಯನ್ನು ಅಲಿಬಾಗ್ ಜೈಲಿಗೆ ಕೋವಿಡ್-19 ಕೇಂದ್ರವೆಂದು ಗೊತ್ತುಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಅಲಿಬಾಗ್ ನ್ಯಾಯಾಲಯವು ಅರ್ನಾಬ್ ಗೋಸ್ವಾಮಿ ಮತ್ತು ಇತರ ಇಬ್ಬರು ಆರೋಪಿಗಳನ್ನು 2018ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 18 ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಿದೆ.
ಪೊಲೀಸರು 14 ದಿನಗಳವರೆಗೆ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ ನ್ಯಾಯಾಲಯವು ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ಹೇಳಿದೆ.
ಬುಧವಾರ ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ನಂತರ, ಅವರನ್ನು ಅಲಿಬಾಗ್ ನಗರ ಪರಿಷದ್ ಶಾಲೆಗೆ ಕರೆದೊಯ್ಯಲಾಯಿತು. ಇದನ್ನು ಅಲಿಬಾಗ್ ಜೈಲಿನ ಕೋವಿಡ್-19 ಕೇಂದ್ರವೆಂದು ಗೊತ್ತುಪಡಿಸಲಾಗಿದೆ. ಅರ್ನಾಬ್ ಈ ಶಾಲೆಯಲ್ಲಿ ರಾತ್ರಿ ಕಳೆದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.