ಚೆನ್ನೈ: ನಟ ರಜನಿಕಾಂತ್ ಅವರ ಆಪ್ತರಾಗಿದ್ದ ಆರ್. ಅರ್ಜುನಮೂರ್ತಿ ಅವರು ಸೋಮವಾರ ಚೆನ್ನೈನ ಕಮಲಾಯಂನಲ್ಲಿರುವ ರಾಜ್ಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮರು ಸೇರ್ಪಡೆಗೊಂಡರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಸಮ್ಮುಖದಲ್ಲಿ ಅರ್ಜುನಮೂರ್ತಿ ಬಿಜೆಪಿಗೆ ಸೇರ್ಪಡೆಯಾದರು.
ಅರ್ಜುನಮೂರ್ತಿ ಅವರು ರಜನಿಕಾಂತ್ ಅವರ ಆಪ್ತ ಸಹಾಯಕರಾಗುವ ಮೊದಲು ಬಿಜೆಪಿಯ ತಮಿಳುನಾಡು ಬೌದ್ಧಿಕ ಕೋಶದ ಮುಖ್ಯಸ್ಥರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಲವಾರು (RSS) ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಅವರು ತಮಿಳುನಾಡು ಬಿಜೆಪಿ ವಲಯದಲ್ಲಿ ಸಕ್ರಿಯರಾಗಿದ್ದರು. ಹೀಗಿದ್ದಾಗ ಅವರು ಡಿಸೆಂಬರ್ 03, 2020 ರಂದು ರಜನಿಕಾಂತ್ ಅವರ ಪಕ್ಷದ ಮುಖ್ಯ ಸಂಯೋಜಕರಾಗಿ ನೇಮಕಗೊಂಡಿದ್ದು ಆಶ್ಚರ್ಯಗೊಳಿಸಿತ್ತು. ಆದರೆ ತಮ್ಮ ಆರೋಗ್ಯದ ಕಾರಣ ನೀಡಿದ ರಜನಿಕಾಂತ್, ಡಿಸೆಂಬರ್ 29, 2020 ರಂದು ತಾವು ರಾಜಕೀಯದಿಂದ ಹೊರ ಹೋಗುವುದಾಗಿ ಘೋಷಿಸಿದ್ದರು.
ಫೆಬ್ರವರಿ 2021 ರಲ್ಲಿ ಅರ್ಜುನಮೂರ್ತಿ ತಮ್ಮ ಸ್ವಂತ ರಾಜಕೀಯ ಪಕ್ಷವಾದ ಇಂಧಿಯ ಮಕ್ಕಳ್ ಮುನ್ನೇತ್ರ ಕಚ್ಚಿಯನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ತಮ್ಮ ಪಕ್ಷ ಸೇರುವಂತೆ ರಜನಿಕಾಂತ್ ಅಭಿಮಾನಿಗಳಿಗೆ ಅರ್ಜುನಮೂರ್ತಿ ಆಹ್ವಾನಿಸಿದ್ದರು.
ತಮಿಳುನಾಡಿನ ಮಧುರೈ ಮತ್ತು ತಿರುಚ್ಚಿಯ ಗಡಿಯಲ್ಲಿರುವ ಪುದುಕೊಟ್ಟೈನಲ್ಲಿ ಬೆಳೆದ ಅರ್ಜುನಮೂರ್ತಿ ಪ್ರಭಾವಿ ಗೌಂಡರ್ ಸಮುದಾಯಕ್ಕೆ ಸೇರಿದವರು. ಅವರು ಜನತಾ ರೋಡ್‌ವೇಸ್ ಮಾಲೀಕರಾಗಿದ್ದ ಉದ್ಯಮಿ ರಾಮಸ್ವಾಮಿ ಅವರ ಪುತ್ರ. ತಮ್ಮ ಕಂಪನಿಯನ್ನು ಮಾರಿದ ನಂತರ ಅರ್ಜುನಮೂರ್ತಿ ಚೆನ್ನೈಗೆ ಬಂದರು.