ಮುಂಬೈ: ಮುಂಬೈನ ಮುಖೇಶ್ ಅಂಬಾನಿ ನಿವಾಸದ ಹೊರಗೆ ಪತ್ತೆಯಾದ ಸ್ಫೋಟಕ ತುಂಬಿದ ಎಸ್ಯುವಿ ವಾಹನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೈಶುಲ್ ಹಿಂದ್ ಸಂಘಟನೆ ಹೆಸರು ಬಳಕೆ ಮಾಡುತ್ತಿರುವುದು ಪೊಲೀಸರ ದೊಡ್ಡ ಪಿತೂರಿ. ಈ ನಕಲಿ ಭಯೋತ್ಪಾದಕ ಸಂಘಟನೆಯ ಹೆಸರು ಬಳಕೆ ಮಾಡಿದ ಪೊಲೀಸರ ವಿರುದ್ಧವೂ ತನಿಖೆ ನಡೆಸಬೇಕು ಎಂದು ಮುಂಬೈನ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಶಂಶರ್ ಖಾನ್ ಪಠಾಣ್ ಆಗ್ರಹಿಸಿದ್ದಾರೆ.
''ಇಂತಹ ಪ್ರಕರಣ ಮುನ್ನೆಲೆಗೆ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಮುಸ್ಲಿಮರನ್ನು ದೂಷಿಸಲಾಗಿದೆ ಮತ್ತು ಗೊಂದಲ ಸೃಷ್ಟಿಸಲು ಪೊಲೀಸರು ಈ ಭಯೋತ್ಪಾದಕ ಸಂಘಟನೆಯ ಹೆಸರುಗಳನ್ನು ರಚಿಸುತ್ತಾರೆ" ಎಂದು ಅವರು ಆರೋಪಿಸಿದ್ದಾರೆ.

"ಈ ಪ್ರಕರಣದಲ್ಲಿ ಸಚಿನ್ ವೇಜ್ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತೀವ್ರ ತನಿಖೆ ನಡೆಸಲಿದೆ. ಜೈಶುಲ್ ಹಿಂದ್ ಎಂದು ಕರೆಯಲ್ಪಡುವ ನಕಲಿ ಸಂಘಟನೆಯನ್ನು ಯಾರು ರಚಿಸಿದರು ಎಂದು ಕೇಳುವುದು ಮುಖ್ಯ" ಎಂದು ಅವರು ಹೇಳಿದರು.