ಆಂಧ್ರಪ್ರದೇಶ : ತಮಿಳಿನ ಜನಪ್ರಿಯ ನಟ ಸೂರ್ಯ ನಿನ್ನೆ (ಜುಲೈ 23) 48 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸೂಪರ್ಸ್ಟಾರ್ ಬರ್ತ್ಡೇ ಗೆ ಕುಟುಂಬ ಸದಸ್ಯರು, ಆಪ್ತರು, ಸಿನಿ ಗಣ್ಯರೂ ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಈ ಬೆನ್ನಲ್ಲೇ ನೆಚ್ಚಿನ ನಟನ ಹುಟ್ಟುಹಬ್ಬದ ಅಂಗವಾಗಿ ಬ್ಯಾನರ್ ಅಳವಡಿಸಲು ಹೋದ ಇಬ್ಬರು ಅಭಿಮಾನಿಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಪಲ್ನಾಡು ಜಿಲ್ಲೆಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮೋಪುಲವಾರಿಪಾಲೆಂ ಗ್ರಾಮದ ನರಸರಾವ್‌ಪೇಟೆ ಮಂಡಲದ ನಕ್ಕಾ ವೆಂಕಟೇಶ್ ಮತ್ತು ಪೋಲೂರಿ ಸಾಯಿ ಎಂಬುವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ನಟ ಸೂರ್ಯ ಅವರ ಬ್ಯಾನರ್ ಅಳವಡಿಸಲು ಹೋದಾಗ ಫ್ಲೆಕ್ಸ್ನ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ತಗುಲಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತರಿಬ್ಬರೂ ನರಸರಾವ್ ಪೇಟೆಯ ಖಾಸಗಿ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೃತದೇಹಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಇದನ್ನೂ ಓದಿ : ಪ್ರತ್ಯೇಕ ಪ್ರಕರಣ : ವಿದ್ಯುತ್ ತಗುಲಿ ಯುವಕ, ರೈತ ಹಾಗೂ ಜಾನುವಾರು ಸಾವು
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೋಲೂರಿ ಸಾಯಿ ಅವರ ಸಹೋದರಿ ಅನನ್ಯಾ, ತಮ್ಮ ಸಹೋದರನ ಸಾವಿಗೆ ಕಾಲೇಜ್ ಅಡಳಿತ ಮಂಡಳಿಯೇ ಕಾರಣ ಎಂದು ಆರೋಪಿಸಿದ್ದಾರೆ. ಕಾಲೇಜಿಗೆ ಸೇರುವ ಮುನ್ನವೇ ವಿದ್ಯಾರ್ಥಿಗಳಿಗೆ ಭದ್ರತೆ, ನಿಗಾ ಇಡುವುದಾಗಿ ಭರವಸೆ ನೀಡಿದ್ದರು. ಆದರೆ, ಕಾಲೇಜು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ನಿಗಾ ಇಡುತ್ತಿಲ್ಲ. ನಾವು ದಿನಗೂಲಿ ನೌಕರರಾಗಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಜಿಮ್‌ನಲ್ಲಿ ಟ್ರೆಡ್‌ಮಿಲ್ ಮೇಲೆ ಓಡುವಾಗ ವಿದ್ಯುತ್ ಪ್ರವಹಿಸಿ ಯುವಕ ಸಾವು
ವಿದ್ಯುತ್ ಸ್ಪರ್ಶಿಸಿ 5 ಮಂದಿ ಸಾವು : ಕನ್ವರ್ ಯಾತ್ರೆ ಮುಗಿಸಿ ಸ್ವಗ್ರಾಮಕ್ಕೆ ಮರಳುತ್ತಿದ್ದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಮೀರತ್ನ ಭಾವನ್ಪುರದಲ್ಲಿ ಜುಲೈ 16 ರಂದು ಸಂಭವಿಸಿತ್ತು. ಕನ್ವರಿಯಾ ಭಕ್ತರಿದ್ದ ತಂಡ ರಾತ್ರಿ 8 ಗಂಟೆಯ ಸುಮಾರಿಗೆ ವಾಹನದಲ್ಲಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಭಾವನ್‌ಪುರ ಪ್ರದೇಶದಲ್ಲಿ ಹೈಟೆನ್ಶನ್ ಓವರ್‌ಹೆಡ್ ವಯರ್ಗೆ ವಾಹನ ಸ್ಪರ್ಶಿಸಿದೆ. ಪರಿಣಾಮ 21 ಮಂದಿಗೂ ಶಾಕ್ ಹೊಡೆದಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ 5 ಮಂದಿ ಸಾವನ್ನಪ್ಪಿದ್ದರು.
ಇದನ್ನೂ ಓದಿ : ಉತ್ತರ ಪ್ರದೇಶ : ವಾಹನಕ್ಕೆ ಹೈಟೆನ್ಶನ್ ತಂತಿ ಸ್ಪರ್ಶ ; ಐವರು ಸಾವು
ಹಾಗೆಯೇ, ಜುಲೈ 20 ರಂದು ಟ್ರೆಡ್‌ಮಿಲ್ ಮೇಲೆ ರನ್ನಿಂಗ್ ಮಾಡುವಾಗ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿರುವ ಘಟನೆ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದ ಜಿಮ್ ಸೆಂಟರ್‌ನಲ್ಲಿ ಬುಧವಾರ ಬೆಳಗ್ಗೆ 7.15 ರ ಸುಮಾರಿಗೆ ನಡೆದಿತ್ತು. ರೋಹಿಣಿಯ ಸೆಕ್ಟರ್-19ರ ನಿವಾಸಿ ಸಕ್ಷಮ್ (24) ಮೃತರೆಂದು ತಿಳಿದು ಬಂದಿತ್ತು.