ಅಮರಾವತಿ(ಮಹಾರಾಷ್ಟ್ರ): ಫಾರ್ಮಾಸಿಸ್ಟ್ ಉಮೇಶ್ ಕೊಲ್ಹೆ ಹತ್ಯೆ ಪ್ರಕರಣ ತನಿಖೆ ಭರದಿಂದ ಸಾಗಿದೆ. ಜೂ. 21ರಂದು ಅಮರಾವತಿಯಲ್ಲಿ ಉಮೇಶ್ ಕೊಲ್ಹೆ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಏಳು ಆರೋಪಿಗಳ ಪೈಕಿ ಓರ್ವ ಕೊಲ್ಹೆಯ ನಿತ್ಯ ಖರೀದಿದಾರನಾಗಿದ್ದು, ಕೊಲ್ಹೆಯಿಂದ ಸಾಲ ಪಡೆದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕೊಲೆಯ ಮುಖ್ಯ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿರುವ ಇರ್ಫಾನ್ ಖಾನ್ನನ್ನು ಜುಲೈ 7 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಕೊಲ್ಹೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಡಾ. ಯೂಸುಫ್ ಖಾನ್ ಅವರಿಂದ ನಿಯಮಿತವಾಗಿ ಔಷಧಗಳನ್ನು ಖರೀದಿಸುತ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಶನಿವಾರ ನಾಗ್ಪುರದಲ್ಲಿ ಆತನನ್ನು ಬಂಧಿಸಿ ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇರ್ಫಾನ್ ಖಾನ್ ಎನ್‌ಜಿಒ ನಿರ್ದೇಶಕರಾಗಿದ್ದು, ಆ ಚಾರಿಟಿಯ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.
ಇದುವರೆಗೆ ಮುದಾಸರ್ ಅಹಮದ್ ಅಲಿಯಾಸ್ ಸೋನು ರಜಾ ಶೇಖ್ ಇಬ್ರಾಹಿಂ (22), ಶಾರುಖ್ ಪಠಾಣ್ ಅಲಿಯಾಸ್ ಬಾದ್ಶಾಶಾ ಹಿದಾಯತ್ ಖಾನ್ (25), ಅಬ್ದುಲ್ ತೌಫಿಕ್ ಅಲಿಯಾಸ್ ನಾನು ಶೇಖ್ ತಸ್ಲೀಂ (24), ಶೋಯಬ್ ಖಾನ್ ಅಲಿಯಾಸ್ ಭೂರ್ಯ ಸಬೀರ್ ಖಾನ್ (22), ಅತೀಬ್ ರಶೀದ್ ಆದಿಲ್ ರಶೀದ್ (22) ), ಡಾ. ಯೂಸುಫ್ ಖಾನ್ ಬಹದ್ದೂರ್ ಖಾನ್ (44) ಬಂಧಿತ ಆರೋಪಿಗಳಾಗಿದ್ದಾರೆ. ಅವರಲ್ಲಿ ನಾಲ್ವರು ಇರ್ಫಾನ್ ಖಾನ್ ಸ್ನೇಹಿತರಾಗಿದ್ದಾರೆ. ಇವರೆಲ್ಲ ಅವರ ಎನ್ಜಿಒಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: ನೂಪುರ್ ಪರ ಪೋಸ್ಟ್: ಮಹಾರಾಷ್ಟ್ರದಲ್ಲೂ ವ್ಯಾಪಾರಿ ಹತ್ಯೆ.. ಎನ್ಐಎ ತನಿಖೆಗೆ ಅಮಿತ್ ಶಾ ಆದೇಶ
ವೃತ್ತಿಯಲ್ಲಿ ರಸಾಯನಶಾಸ್ತ್ರಜ್ಞರಾದ 54 ವರ್ಷದ ಉಮೇಶ್ ಕೊಲ್ಹೆ ಅವರು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕಾಗಿಯೇ ಅವರ ಹತ್ಯೆ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಅಮರಾವತಿ ಡಿಸಿಪಿ ವಿಕ್ರಮ್ ಸಾಲಿ ಹೇಳಿದ್ದಾರೆ.
ಜೂನ್ 21 ರಂದು ರಾತ್ರಿ 10 ರಿಂದ 10.30 ರ ನಡುವೆ ಈ ಘಟನೆ ಸಂಭವಿಸಿದೆ. ಕೊಲ್ಹೆ ಅವರು ತಮ್ಮ ಅಂಗಡಿಯನ್ನು ಮುಚ್ಚಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಈ ಹತ್ಯೆ ನಡೆದಿದೆ. ಕೊಲ್ಹೆ ಅವರ ಮಗ ಸಂಕೇತ್ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಅಪರಾಧಕ್ಕೆ ಬಳಸಿದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.