ಶ್ರೀನಗರ (ಜಮ್ಮು-ಕಾಶ್ಮೀರ): ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆಯಿಂದ 3 ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಶ್ರೀನಗರದ ಲಾಲ್ ಚೌಕ್ ಪ್ರದೇಶದಲ್ಲಿ ಭದ್ರತಾ ಪಡೆಗಳು ವೈಮಾನಿಕ ಕಣ್ಗಾವಲು ನಡೆಸಿವೆ ಎಂದು ಸಿಆರ್‌ಪಿಎಫ್ ಡಿಐಜಿ ಮ್ಯಾಥ್ಯೂ ಎ. ಜಾನ್ ತಿಳಿಸಿದ್ದಾರೆ.
ಸಿಆರ್‌ಪಿಎಫ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ವಾಸಿಸುವ ಪ್ರದೇಶದಲ್ಲಿ ಡ್ರೋನ್‌ಗಳನ್ನು ಬಳಸಿ ವೈಮಾನಿಕ ಕಣ್ಗಾವಲು ನಡೆಸಿದ್ದು, ಅಲ್ಪಸಂಖ್ಯಾತರು ಮತ್ತು ಸ್ಥಳೀಯೇತರ ಕಾರ್ಮಿಕರ ಮೇಲೆ ಇತ್ತೀಚಿಗೆ ದಾಳಿಗಳು ನಡೆದಿರುವ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಕೈಗೊಂಡಿರುವುದಾಗಿ ಅವರು ವಿವರಿಸಿದ್ದಾರೆ.
ಲಾಲ್ ಚೌಕ್ ಸುತ್ತಮುತ್ತ ಹೆಚ್ಚುವರಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ದಿನದ 24 ಗಂಟೆಯೂ ಭದ್ರತಾ ಪಡೆಗಳ ಕಣ್ಗಾವಲಿನಲ್ಲಿರುತ್ತದೆ. ಕೇಂದ್ರ ಸಚಿವ ಅಮಿತ್ ಶಾ ಶನಿವಾರ ಕಾಶ್ಮೀರಕ್ಕೆ ಭೇಟಿ ನೀಡಿ ಶ್ರೀನಗರದಲ್ಲಿ ಭದ್ರತಾ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸ್ಥಳೀಯ ರಾಜಕೀಯ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.
ಅಮಿತ್ ಶಾ ಅವರ 3 ದಿನಗಳ ಪ್ರವಾಸದ ವಿವರ
ಮೂಲಗಳ ಪ್ರಕಾರ ಅಮಿತ್ ಶಾ ಶ್ರೀನಗರಕ್ಕೆ ಬಂದಿಳಿದ ನಂತರ, ಶ್ರೀನಗರ ಮತ್ತು ಶಾರ್ಜಾ ನಡುವಿನ ಮೊದಲ ಅಂತಾರಾಷ್ಟ್ರೀಯ ವಿಮಾನವನ್ನು ಶನಿವಾರ ಉದ್ಘಾಟಿಸಲಿದ್ದಾರೆ. ಶ್ರೀನಗರ - ಶಾರ್ಜಾ ನೇರ ವಿಮಾನಯಾನ ಆರಂಭದ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಳೆದ ತಿಂಗಳು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಘೋಷಣೆ ಮಾಡಿದ್ದರು.
ನಂತರ ಅಮಿತ್ ಶಾ ಅವರು ಶೇರ್-ಐ-ಕಾಶ್ಮೀರ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರಕ್ಕೆ (SKICC) ಭೇಟಿ ನೀಡಲಿದ್ದಾರೆ. ಪ್ರಸಿದ್ಧ ಸೂಫಿ ಗಾಯಕ ಶಾಫಿ ಸೊಪೋರಿ ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸುವ ಸಾಧ್ಯತೆ ಇದೆ.
ಎಸ್‌ಕೆಐಸಿಸಿಯಲ್ಲಿ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ನಾಗರಿಕರ ಮೇಲಿನ ದಾಳಿಗಳಲ್ಲಿ ಕೊಲ್ಲಲ್ಪಟ್ಟ ಮೂರು ಕುಟುಂಬಗಳನ್ನು ಭೇಟಿಯಾಗಲಿದ್ದಾರೆ. ಕಾಶ್ಮೀರಿ ಪಂಡಿತ್ ಮಖನ್ ಲಾಲ್ ಬಿಂದ್ರೂ, ಸುಪಿಂದರ್ ಕೌರ್ ಮತ್ತು 25 ವರ್ಷದ ಸಬ್ ಇನ್ಸ್‌ಪೆಕ್ಟರ್ ಅರ್ಷದ್ ಅಹ್ಮದ್ ಮಿರ್ ಅವರ ಕುಟುಂಬ ಭೇಟಿ ಮಾಡುವ ಸಾಧ್ಯತೆಯಿದೆ.
ಅದೇ ದಿನ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಮಾತುಕತೆ ನಡೆಸಲಿದ್ದು, ಶ್ರೀನಗರದ ರಾಜ್ ಭವನದಲ್ಲಿ ಭದ್ರತಾ ಮತ್ತು ಗುಪ್ತಚರ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ಬಿಜೆಪಿ ಕಚೇರಿಗೆ ಭೇಟಿ
ಎರಡನೇ ದಿನ ಅಮಿತ್ ಶಾ ಜಮ್ಮುವಿಗೆ ಆಗಮಿಸಲಿದ್ದು, ಪಕ್ಷದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಭಗವತಿ ನಗರದಲ್ಲಿ ಸಾರ್ವಜನಿಕ ರ‍್ಯಾಲಿ ನಡೆಸುವ ಸಾಧ್ಯತೆಯಿದೆ. ಅವರು ಬಹುಶಃ ಕೇಂದ್ರದ ಕಾರ್ಯಕ್ರಮದ ಭಾಗವಾಗಿ ವಿವಿಧ ನಿಯೋಗಗಳನ್ನು ಭೇಟಿ ಮಾಡಬಹುದು.
ಬಳಿಕ ಶ್ರೀನಗರಕ್ಕೆ ಹಿಂತಿರುಗಿ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾದ ಸಿಆರ್‌ಪಿಎಫ್ ಕೇಂದ್ರಕ್ಕೆ ತೆರಳಲಿದ್ದಾರೆ. ಈ ವೇಳೆ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸುತ್ತಾರೆ.
ಸಿಆರ್‌ಪಿಎಫ್ ಹುತಾತ್ಮರಿಗೆ ಗೌರವ
ಅಂತಿಮ ದಿನದಂದು ಅಮಿತ್ ಶಾ ಕೇಂದ್ರ ಮೀಸಲು ಪೊಲೀಸ್ ಪಡೆಯ ಹುತಾತ್ಮ ಸಿಬ್ಬಂದಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ಶ್ರೀನಗರಕ್ಕೆ ಹಿಂತಿರುಗಿ ಐತಿಹಾಸಿಕ ಕೇಂದ್ರದಲ್ಲಿ ವಿವಿಧ ನಿಯೋಗಗಳನ್ನು ಭೇಟಿ ಮಾಡಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿಲಿದ್ದಾರೆ. ಬಳಿಕ ಸಂಜೆ ಅಲ್ಲಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ.
ಗೃಹ ಸಚಿವ ಅಮಿತ್ ಶಾ ಭೇಟಿಗೂ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನ ಡ್ರೋನ್‌ಗಳು, ಸ್ನೈಪರ್‌ಗಳು ಮತ್ತು ಹೆಚ್ಚುವರಿ ಭದ್ರತಾ ಪಡೆಗಳನ್ನು ಶ್ರೀನಗರಕ್ಕೆ ಕರೆಸಿಕೊಳ್ಳಲಾಗಿದೆ.