ಗೋಪಾಲಗಂಜ್ (ಬಿಹಾರ): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಟ್ವಿಟ್ಟರ್ ಖಾತೆಯನ್ನು ನಕಲು ಮಾಡಿ ವಿವಾದಾತ್ಮಕ ಪೋಸ್ಟ್ ಹಾಕಿದ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬಿಜೆಪಿ ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.
ವೈರಲ್ ಪೋಸ್ಟಲ್ಲಿ ಏನಿತ್ತು?: 'ಬಿಹಾರದ ರಾಜ್ಯ ಉಪಾಧ್ಯಕ್ಷರೇ ಸುಧಾರಿಸಿಕೊಳ್ಳಿ. ಇಲ್ಲವಾದರೆ, ನಾವೇ ಅಲ್ಲಿಗೆ ಬರಬೇಕಾಗುತ್ತದೆ. ಮಾನ್ಯ ಶಾಸಕರಾದ ರಾಮ್ಪ್ರವೇಶ್ ಜೀ ನೀವು ಕೂಡ ಮಾತ್ರೆಗಳನ್ನು ತೆಗೆದುಕೊಳ್ಳಿ' ಎಂದು ಬರೆದ ಪೋಸ್ಟ್ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ಟ್ವೀಟ್ ಮಾಡಲಾಗಿದೆ.
ಈ ಪೋಸ್ಟ್ ವೈರಲ್ ಆಗಿದ್ದು, ಈ ಬಗ್ಗೆ ಬಿಜೆಪಿಯಲ್ಲಿ ಆತಂಕ ಉಂಟಾಗಿದೆ. ಇದೊಂದು ನಕಲಿ ಟ್ವೀಟ್ ಆಗಿದ್ದು, ಅದನ್ನು ಕಿಡಿಗೇಡಿಗಳು ಯಾರೋ ವೈರಲ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಬೈಕುಂಠಪುರದ ಮಾಜಿ ಶಾಸಕ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಿಥಿಲೇಶ್ ತಿವಾರಿ ಮೇ 13 ರಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ವಿಕ್ಕಿ ಕುಮಾರ್ ಸಿಂಗ್ ಮತ್ತು ಪ್ರವೀಣ್ ಕುಮಾರ್ ಸಿಂಗ್ ಆರೋಪಿಗಳಾಗಿದ್ದಾರೆ ಎಂದು ಬಿಜೆಪಿ ದೂರಿದೆ. ದೂರು ದಾಖಲಿಸಿಕೊಂಡ ಪೊಲೀಸರು ವಿಕ್ಕಿ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಬ್ಬಾತ ತಲೆಮರೆಸಿಕೊಂಡಿದ್ದಾನೆ.
ಜೆಡಿಯು ಪ್ರತಿಭಟನೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಖಂಡಿಸಿ ಜೆಡಿಯು ಮಹಮದ್‌ಪುರ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದೆ. ಪೊಲೀಸರ ಕ್ರಮ ಅನ್ಯಾಯ, ದೌರ್ಜನ್ಯ ಎಂದು ಆರೋಪಿಸಿದೆ. ಬಂಧಿತ ವಿಕ್ಕಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾನೆ.
ಬಂಧಿತ ಯುವಕನ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ಟ್ವಿಟ್ಟರ್ ಖಾತೆಯನ್ನು ನಕಲು ಮಾಡಿದ ಆರೋಪವಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಿಥಿಲೇಶ್ ತಿವಾರಿ ಅವರ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಲಾಗಿದೆ. ಇದು ಗೃಹ ಸಚಿವರ ಭದ್ರತಾ ವಿಷಯವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಆನಂದ್ ಕುಮಾರ್ ಹೇಳಿದ್ದಾರೆ.
ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ: ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದೆ ಎಂದ ಹಿಂದೂ ವಕೀಲರು!