ಮೀರತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ವೊಂದರಲ್ಲಿ ಡೀಸೆಲ್ ಖಾಲಿಯಾದ ಹಿನ್ನೆಲೆಯಲ್ಲಿ ಅದನ್ನು ಟ್ರ್ಯಾಕ್ಟರ್‌ಗೆ ಕಟ್ಟಿ ಎಳೆದೊಯ್ಯಲಾಗಿದೆ. ಉತ್ತರ ಪ್ರದೇಶದ ಮೀರತ್ನಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶನಿವಾರ ಸಂಜೆ ಬಿಜ್ನೋರ್‌ನಿಂದ ಮೀರತ್‌ಗೆ ಆ್ಯಂಬುಲೆನ್ಸ್ನಲ್ಲಿ ರೋಗಿಯನ್ನು ಸಾಗಿಸಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯೆಯೇ ಇಂಧನ ಖಾಲಿಯಾಗಿದೆ. ಆದ್ದರಿಂದ ಸ್ಥಳೀಯರೊಬ್ಬರು ತಮ್ಮ ಟ್ರ್ಯಾಕ್ಟರ್‌ಗೆ ಕಟ್ಟಿ ಆ್ಯಂಬುಲೆನ್ಸ್ನ್ನು ಸಮೀಪದ ಪಂಪ್ಗೆ ಎಳೆದೊಯ್ದು ಬಿಟ್ಟಿದ್ದಾರೆ. ಇದರ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ. ಅಲ್ಲದೇ, ಟ್ರ್ಯಾಕ್ಟರ್‌ಗೆ ಕಟ್ಟಿ ಆ್ಯಂಬುಲೆನ್ಸ್ನ್ನು ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಜತೆಗೆ ವಿಡಿಯೋ ವೈರಲ್ ಆಗಿದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಲ್ಲೂ ನಡುಕ ಶುರುವಾಗಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮೀರತ್‌ನ ಮುಖ್ಯ ವೈದ್ಯಾಧಿಕಾರಿ ಡಾ.ಅಖಿಲೇಶ್ ಮೋಹನ್, ಆ್ಯಂಬುಲೆನ್ಸ್ ಮೀರತ್‌ಗೆ ಸೇರಿದ್ದಲ್ಲ. ಅದು ಬಿಜ್ನೋರ್‌ನಿಂದ ಮೀರತ್‌ಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಇಂಧನ ಖಾಲಿಯಾಗಿದೆ ಎಂದಷ್ಟೇ ಹೇಳಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ಗೆ ವಂಚನೆ ಆರೋಪ: ಮಹಾರಾಷ್ಟ್ರ ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಿಗೆ ನೋಟಿಸ್