ಚಂಡೀಗಢ(ಪಂಜಾಬ್): ಕೃಷಿ ಕಾಯ್ದೆಗಳನ್ನು ರದ್ದು ಮಾಡಿದರೆ ಬಿಜೆಪಿಯೊಂದಿಗೆ ಮೈತ್ರಿಗೆ ಸಿದ್ಧ ಎಂದಿದ್ದ ಪಂಜಾಬ್ ಮಾಜಿ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಇದೀಗ ಕಮಲ ಪಕ್ಷದೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ. ಈ ಸಂಬಂಧ ಇಂದು ಕೇಂದ್ರ ಸಚಿವ ಮತ್ತು ಪಂಜಾಬ್ ಬಿಜೆಪಿ ಉಸ್ತುವಾರಿ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಮರೀಂದರ್ ಸಿಂಗ್‌ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮಹೇಂದ್ರ ಬಾಗ್‌ನಲ್ಲಿರುವ ಫಾರಂ ಹೌಸ್‌ಗೆ ಸಚಿವ ಶೇಖಾವತ್ ಭೇಟಿ ಸಿಂಗ್ ಅವರೊಂದಿಗೆ ಊಟ ಮಾಡಿದ್ದಾರೆ. ಮುಂದಿನ ವಿಧಾನಸಭೆ ಚುವನಾಣೆಯಲ್ಲಿ ಪಿಎಲ್‌ಸಿ ಹಾಗೂ ಬಿಜೆಪಿಯೊಂದಿಗೆ ದೋಸ್ತಿ ಪಕ್ಕಾ ಎನ್ನಲಾಗಿದ್ದು, ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಎರಡು ಪಕ್ಷಗಳು ಮೈತ್ರಿ ಬಗ್ಗೆ ಇಲ್ಲಿಯವರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯೊಂದನ್ನು ಹೊರತುಪಡಿಸಿದರೆ ಬಿಜೆಪಿಯಿಂದ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ.
ಹಿರಿಯ ನಾಯಕರ ಭೇಟಿ ಬಳಿಕ ನಿರ್ಧಾರ
ಈ ಇಬ್ಬರು ನಾಯಕರ ಸಭೆಯಲ್ಲಿ ಏನೇ ಚರ್ಚೆ ನಡೆದರೂ ಅದರ ವರದಿಯನ್ನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ನೀಡಲಾಗುವುದು. ಶೀಘ್ರದಲ್ಲೇ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಂತಿಮ ನಿರ್ಧಾರ ಕೈಗೊಂಡ ಬಳಿಕ ಅಧಿಕೃತವಾಗಿ ಮೈತ್ರಿಯ ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕ್ಯಾ.ಅಮರೀಂದರ್ ಸಿಂಗ್ ವಿರುದ್ಧ ಸಿಧು ವಾಗ್ದಾಳಿ
ಕ್ಯಾ.ಅಮರೀಂದರ್ ಅವರ ಹೊಸ ಪಕ್ಷ ಬಿಜೆಪಿಯೊಂದಿಗೆ ಮೈತ್ರಿಯ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಅಮರೀಂದರ್ ಸಿಂಗ್ ವಿರುದ್ಧ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಾಗ್ದಾಳಿ ನಡೆಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಕ್ಯಾಪ್ಟನ್ ಹಾಗೂ ಹಿಂದಿನ ಅಡ್ವೊಕೇಟ್ ಜನರಲ್ ಅತುಲ್ಯ ನಂದಾ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ತಪ್ಪಿತಸ್ಥರನ್ನು ರಕ್ಷಿಸಲು ಈ ಇಬ್ಬರೂ ವಿಳಂಬ ಮಾಡಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಈ ನಿಟ್ಟಿನಲ್ಲಿ ಹೊಸ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಿಂದ ಸರ್ಕಾರದ ಮೇಲೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದು ಸಿದ್ದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರೈತರ ಎಲ್ಲ ಬೇಡಿಕೆ ಅಂಗೀಕಾರಕ್ಕೆ ಕೇಂದ್ರದ ಒಪ್ಪಿಗೆ: ಪ್ರತಿಭಟನೆ ಹಿಂಪಡೆದುಕೊಳ್ಳಲಿರುವ ಅನ್ನದಾತರು!?