ನವದೆಹಲಿ: ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಕೇಂದ್ರ ಎನ್ಡಿಎ ಸರ್ಕಾರ ಸರ್ವ ಪಕ್ಷ ನಡೆಸುತ್ತಿದ್ದು, ಅಧಿವೇಶನದಲ್ಲಿ ಪೆಗಾಸಸ್ ಗೂಢಚಾರಿಕೆ, ಅಗತ್ಯವಸ್ತುಗಳ ಬೆಲೆ ಏರಿಕೆ ಮತ್ತು ನಿರುದ್ಯೋಗ ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ತನ್ನ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತಂತೆಯೂ ಸರ್ವ ಪಕ್ಷ ಸಭೆಯಲ್ಲಿ ಕಳವಳ ವ್ಯಕ್ತವಾಗಿದೆ. ಅದರ ಜೊತೆಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ತರಬೇಕೆಂದು ಹಾಗೂ ಸಾರ್ವಜನಿಕ ವಲಯದಲ್ಲಿ ಲಾಭದಲ್ಲಿರುವ ಉದ್ಯಮಗಳಲ್ಲಿನ ಬಂಡವಾಳ ಹಿಂಪಡೆತ ವಿಚಾರ ಚರ್ಚೆ ನಡೆಸಬೇಕೆಂದು ತೃಣಮೂಲ ಕಾಂಗ್ರೆಸ್ನ ಸುದೀಪ್ ಬಂಡೋಪಾಧ್ಯಾಯ ಮತ್ತು ಡೆರೇಕ್ ಓ ಬ್ರಿಯಾನ್ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಮತ್ತು ಆನಂದ್ ಶರ್ಮಾ, ಡಿಎಂಕೆಯಿಂದ ಟಿಆರ್ ಬಾಲು ಮತ್ತು ತಿರುಚಿ ಶಿವ, ಎನ್‌ಸಿಪಿಯಿಂದ ಶರದ್ ಪವಾರ್, ಶಿವಸೇನೆಯಿಂದ ವಿನಾಯಕ ರಾವತ್, ಸಮಾಜವಾದಿ ಪಕ್ಷದಿಂದ ರಾಮಗೋಪಾಲ್ ಯಾದವ್ ಸೇರಿದಂತೆ ಪ್ರಮುಖ ಪ್ರತಿಪಕ್ಷದ ನಾಯಕರು ಉಪಸ್ಥಿತರಿದ್ದರು.
ಅಧಿವೇಶನವು ನವೆಂಬರ್ 29ರಂದು ಪ್ರಾರಂಭವಾಗಿ, ಡಿಸೆಂಬರ್ 23ರಂದು ಮುಕ್ತಾಯಗೊಳ್ಳಲಿದೆ. ನವೆಂಬರ್ 29ರಂದು ಎಲ್ಲಾ ಸಂಸದರು ಉಭಯ ಸದನಗಳಲ್ಲಿ ಹಾಜರಿರಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ ವಿಪ್ ಜಾರಿ ಮಾಡಿವೆ.
ಇದನ್ನೂ ಓದಿ: ನಾಳೆಯಿಂದ ಸಂಸತ್ ಚಳಿಗಾಲದ ಅಧಿವೇಶನ: ಸರ್ವಪಕ್ಷಗಳ ಸಭೆ ಆರಂಭ