ಮುಂಬೈ (ಮಹಾರಾಷ್ಟ್ರ): ಮತ್ತೊಂದು ಮಿಂಚಿನ ರಾಜಕೀಯ ಬೆಳವಣಿಗೆಗೆ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಒಂದೇ ವರ್ಷದಲ್ಲಿ ಎರಡು ಪಕ್ಷಗಳಾದ ಶಿವಸೇನೆ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಇಬ್ಭಾಗವಾಗಿವೆ. ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದ ಎನ್‌ಸಿಪಿಯ ಹಿರಿಯ ಮುಖಂಡ ಅಜಿತ್ ಪವಾರ್ ದಿಢೀರ್ ಬೆಳವಣಿಗೆಗಳಲ್ಲಿ ಭಾನುವಾರ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಉಪ ಮುಖ್ಯಮಂತ್ರಿಯಾಗಿ ಸೇರ್ಪಡೆಗೊಂಡಿದ್ದಾರೆ.
ಮುಂಬುವರ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿಯೇತರ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಬೇಕು. ಒಂದಾಗಿ ಚುನಾವಣೆ ಎದುರಿಸಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಇತ್ತೀಚಿಗೆ ಪಾಟ್ನಾದಲ್ಲಿ ನಡೆದ 15 ಪ್ರತಿಪಕ್ಷಗಳು ಸಭೆ ಸೇರಿದ್ದವು. ಇದರ ನಡುವೆ ಮಹಾರಾಷ್ಟ್ರದ ಎನ್‌ಸಿಪಿ, ಕಾಂಗ್ರೆಸ್ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟಕ್ಕೆ ಬಲವಾದ ಹೊಡೆತ ಬಿದ್ದಿದೆ. ಪಾಟ್ನಾದ ಸಭೆಯಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಭಾಗವಹಿಸಿದ್ದು, ಮಹಾರಾಷ್ಟ್ರದ ವಿಧಾನಸಭೆಯ ನಾಯಕರಾದ ಅಜಿತ್ ಪವಾರ್ ಮತ್ತು ಅವರ ಬೆಂಬಲಿಗರನ್ನು ಕೆರಳಿಸಿತು ಎಂದು ಮೂಲಗಳು ತಿಳಿಸಿವೆ.
ಇಂದು ಮುಂಬೈನ ತಮ್ಮ ಅಧಿಕೃತ ನಿವಾಸ ದೇವಗಿರಿಯಲ್ಲಿ ಅಜಿತ್ ಪವಾರ್ ಪಕ್ಷದ ಕೆಲ ಮುಖಂಡರು ಮತ್ತು ಶಾಸಕರೊಂದಿಗೆ ಸಭೆ ನಡೆಸಿ, ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಸೇರಿದ್ದಾರೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮ್ಮುಖದಲ್ಲಿ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ಇತರ ಎಂಟು ಎನ್‌ಸಿಪಿ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಮೇಶ್ ಬೈಸ್ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿದ ನಾಯಕರಲ್ಲಿ ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಹಸನ್ ಮುಶ್ರೀಫ್, ಧನಂಜಯ್ ಮುಂಡೆ, ಅದಿತಿ ತತ್ಕರೆ, ಧರ್ಮರಾವ್ ಅತ್ರಮ್, ಅನಿಲ್ ಪಾಟೀಲ್ ಮತ್ತು ಸಂಜಯ್ ಬನ್ಸೋಡೆ ಸೇರಿದ್ದಾರೆ.
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ: ರಾಜಭವನದ ಸಮಾರಂಭದಲ್ಲಿ ಉಪಸ್ಥಿತರಿದ್ದ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್, ಅಜಿತ್ ಪವಾರ್ ಅವರು ವಿಧಾನಸಭೆಯ ಪ್ರತಿಪಕ್ಷ ನಾಯಕ (ಎಲ್‌ಒಪಿ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಉಪ ಸ್ಪೀಕರ್ ನರಹರಿ ಜಿರ್ವಾಲ್ ಮತ್ತು ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಕೂಡ ರಾಜಭವನದಲ್ಲಿ ಉಪಸ್ಥಿತರಿದ್ದರು.
40 ಎನ್‌ಸಿಪಿ ಶಾಸಕರ ಬೆಂಬಲ - ಬಿಜೆಪಿ: 288 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಎನ್‌ಸಿಪಿ ಒಟ್ಟು 53 ಶಾಸಕರನ್ನು ಹೊಂದಿದೆ. ಈ ಪೈಕಿ ಎನ್‌ಸಿಪಿಯ 40 ಶಾಸಕರು ರಾಜ್ಯ ಸರ್ಕಾರವನ್ನು ಬೆಂಬಲಿಸಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬವಾಂಕುಲೆ ಹೇಳಿದ್ದಾರೆ. ಮತ್ತೊಂದೆಡೆ, ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಮತ್ತು ಮಾಜಿ ರಾಜ್ಯ ಸಚಿವ ಆಶಿಶ್ ಶೇಲಾರ್ ಮಾತನಾಡಿ, ಸಿಎಂ ಏಕನಾಥ್ ಶಿಂಧೆ ಅವರು ಹಿಂದುತ್ವವನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಿದ್ದರು. ಇಂದು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಪ್ರಮುಖ ಬಣ ಶಿಂಧೆ ಮತ್ತು ಫಡ್ನವಿಸ್ ಸರ್ಕಾರವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸೇರಿಕೊಳ್ಳುತ್ತಿದೆ. ಮೋದಿ ಅವರಿಗೆ ಬೆಂಬಲವನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಸರಿಯಾಗಿ ಒಂದು ವರ್ಷ: ಕಳೆದ ವರ್ಷ ಕೂಡ ಮಹಾರಾಷ್ಟ್ರ ರಾಜಕೀಯದಲ್ಲಿ ಇದೇ ರೀತಿಯಾಗಿ ರಾಜಕೀಯ ಮೇಲಾಟ ನಡೆಸಿತ್ತು. ಶಿವಸೇನೆಯ ನಾಯಕ ಏಕನಾಥ್ ಶಿಂಧೆ ಎನ್‌ಸಿಪಿ, ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದು ಶಿವಸೇನೆಯನ್ನು ಇಬ್ಭಾಗ ಮಾಡಿದ್ದರು. ತಮ್ಮದೇ ನೇತೃತ್ವದ ಶಾಸಕರನ್ನು ಒಟ್ಟುಗೂಡಿಸಿ ಬಿಜೆಪಿಯೊಂದಿಗೆ ಮೈತ್ರಿಕೊಂಡಿದ್ದರು. 2022ರ ಜೂನ್ 30ರಂದು ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಹಾಗೂ ಬಿಜೆಪಿಯ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಇದೀಗ ಸರಿಯಾಗಿ ವರ್ಷಕ್ಕೆ ಅಜಿತ್ ಪವಾರ್ ಎನ್ಸಿಪಿಯನ್ನು ವಿಭಜಿಸಿದ್ದಾರೆ.
80 ಗಂಟೆಗಳಲ್ಲಿ ಸರ್ಕಾರ ಪತನವಾಗಿತ್ತು: 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ದೀರ್ಘಕಾಲದ ಮಿತ್ರ ಬಿಜೆಪಿಯೊಂದಿಗೆ ಸಂಬಂಧವನ್ನು ಮುರಿದುಕೊಂಡಿತ್ತು. ನಂತರ ರಾಜಭವನದಲ್ಲಿ ನಡೆದ ಗೌಪ್ಯ ಸಮಾರಂಭದಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಈ ಸರ್ಕಾರವು ಕೇವಲ 80 ಗಂಟೆಗಳಲ್ಲಿ ಪತನವಾಗಿತ್ತು. ಇದರ ಬಳಿಕವೇ ಎನ್‌ಸಿಪಿ, ಕಾಂಗ್ರೆಸ್, ಶಿವಸೇನೆ ಮೈತ್ರಿಕೊಂಡಿದ್ದವು.
ನಾಲ್ಕು ವರ್ಷದಲ್ಲಿ ನಾಲ್ಕು ಬಾರಿ ಪ್ರಮಾಣ ವಚನ ಸಮಾರಂಭ: 2019ರ ವಿಧಾನಸಭಾ ಚುನಾವಣೆಯ ಮಹಾರಾಷ್ಟ್ರವು ನಾಲ್ಕು ವರ್ಷದ ಅವಧಿಯಲ್ಲಿ ನಾಲ್ಕು ಪ್ರಮಾಣವಚನ ಸ್ವೀಕಾರ ಸಮಾರಂಭಗಳನ್ನು ಕಂಡಿದೆ. 2019ರ ನವೆಂಬರ್ನಲ್ಲಿ ದೇವೇಂದ್ರ ಫಡ್ನವೀಸ್ (ಸಿಎಂ), ಅಜಿತ್ ಪವಾರ್ (ಡಿಸಿಎಂ) ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ತಿಂಗಳಲ್ಲಿ ಉದ್ಧವ್ ಠಾಕ್ರೆ ಪದಗ್ರಹಣ ಮಾಡಿದ್ದರು. ಈ ಸಮಯದಲ್ಲಿ ಎನ್ಸಿಪಿಗೆ ಮರಳಿದ್ದ ಅಜಿತ್ ಪವಾರ್ ಮತ್ತೆ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. 2022ರ ಜೂನ್ನಲ್ಲಿ ಏಕನಾಥ್ ಶಿಂಧೆ ಹಾಗೂ ದೇವೇಂದ್ರ ಫಡ್ನವೀಸ್ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಈಗ ಅಜಿತ್ ಪವಾರ್ ಮತ್ತೊಮ್ಮೆ ಡಿಸಿಎಂ ಆಗಿ ಪ್ರಮಾಣವಚನ ಪದಗ್ರಹಣ ಮಾಡಿದ್ದಾರೆ.
ಇದನ್ನೂ ಓದಿ: Maharashtra politics: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ: ಡಿಸಿಎಂ ಆಗಿ ಅಜಿತ್ ಪವಾರ್ ಅಧಿಕಾರ ಸ್ವೀಕಾರ