ನವದೆಹಲಿ: ಲಖೀಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಎಸ್ಐಟಿ ಇದೀಗ ವರದಿ ಬಹಿರಂಗಗೊಳಿಸಿದ್ದು, ಇದೊಂದು ಯೋಜಿತ ಪಿತೂರಿ ಎಂಬ ಮಾಹಿತಿ ಹೊರಹಾಕಿದೆ. ವಿರೋಧ ಪಕ್ಷಗಳಿಂದ ಒತ್ತಡ ಹೆಚ್ಚುತ್ತಿದ್ದು, ಇದರ ನಡುವೆಯೇ ಇಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಇಲಾಖೆ ಸಂಬಂಧಿತ ಸಭೆ ನಡೆಸಿದ್ದಾರೆ.
ಗೃಹ ವ್ಯವಹಾರಗಳ ಸಚಿವಾಲಯವನ್ನು ಬೆಳಗ್ಗೆ 10.15 ರ ಸುಮಾರಿಗೆ ತಲುಪಿ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡರು. ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡ ನಂತರ ಗೃಹ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ತಮ್ಮ ಪುತ್ರ ಆಶಿಶ್ ಮಿಶ್ರಾ ಜೈಲು ಸೇರಿದ ಒಂದು ದಿನದ ನಂತರ ಸಚಿವರು ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಲು ಲಖೀಂಪುರ ಖೇರಿಗೆ ಭೇಟಿ ನೀಡಿದರು. ಕಾರ್ಯಕ್ರಮದ ನಂತರ ವರದಿಗಾರನೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿ ಆಕ್ರೋಶ ವ್ಯಕ್ತವಾಗುತ್ತಿದೆ.
ವರದಿಗಾರನೊಂದಿಗೆ ಅಸಭ್ಯ ವರ್ತನೆ:
ಸಚಿವ ಅಜಯ್ ಮಿಶ್ರಾ ತಮ್ಮ ಸಂಸದೀಯ ಕ್ಷೇತ್ರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಆಗಮಿಸಿದ್ದರು. ಕಾರ್ಯಕ್ರಮ ಮುಕ್ತಾಯದ ಬಳಿಕ ಲಖೀಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯ ವಿಚಾರವಾಗಿ ಪ್ರಶ್ನೆ ಕೇಳಿದ್ದಾರೆ. ಈ ವೇಳೆ, ಕೋಪಗೊಂಡಿರುವ ಸಚಿವರು ಪತ್ರಕರ್ತನೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದು, ಆತನನ್ನು ತಳ್ಳಲು ಮುಂದಾಗಿದ್ದಾರೆ. ಜೊತೆಗೆ ಮೊಬೈಲ್ ಸ್ವಿಚ್ಡ್ ಆಫ್ ಮಾಡುವಂತೆ ಸೂಚನೆ ನೀಡಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಇದೀಗ ವೈರಲ್ ಆಗಿವೆ.
ವಿರೋಧ ಪಕ್ಷಗಳ ಒತ್ತಾಯ:
ಅಕ್ಟೋಬರ್ 3 ರಂದು ಲಖೀಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆಯು "ಯೋಜಿತ ಪಿತೂರಿ" ಎಂದು ವಿಶೇಷ ತನಿಖಾ ತಂಡದ ವರದಿಯ ನಂತರ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂಬ ವಿರೋಧ ಪಕ್ಷಗಳ ಒತ್ತಾಯ ಜೋರಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಆಶಿಶ್ ಮಿಶ್ರಾ ಚಲಾಯಿಸುತ್ತಿದ್ದ ಕಾರು ರೈತರ ಮೇಲೆ ಹರಿದಿದೆ ಎಂದು ವರದಿ ಹೇಳಿದೆ.
ಪ್ರಕರಣ:
ಅಕ್ಟೋಬರ್ 3 ರಂದು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾಗೆ ಸೇರಿದ್ದ ಕಾರು ಹರಿದು ನಾಲ್ವರು ರೈತರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಲಖೀಂಪುರ ಖೇರಿ ಪ್ರಕರಣ; ಕಲಾಪಗಳು ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ
ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ ಇಂದು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಪ್ರತಿಧ್ವನಿಸಿತು. ಸಚಿವ ಅಜಯ್ ಮಿಶ್ರಾ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ವಿಪಕ್ಷಗಳು ಭಾರಿ ಕದ್ದಲ ಎಬ್ಬಿಸಿ, ಕಲಾಪ ಮುಂದೂಡಲಾಗಿತ್ತು.