ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಪುರುಷ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಘಾತಕಾರಿ ಅಂಶಗಳು ಹೊರಬರುತ್ತಿವೆ. ವಿಮಾನದಲ್ಲಿ ಊಟದ ಸಮಯದಲ್ಲಿ ಆರೋಪಿಯು ನಾಲ್ಕು ಗ್ಲಾಸ್ ವಿಸ್ಕಿಯನ್ನು ಸೇವಿಸಿದ್ದ. ಸಂತ್ರಸ್ತೆಗೆ ವಿಮಾನದ ಪೈಲಟ್ ಎರಡು ಗಂಟೆಗಳ ಕಾಲ ಕಾಯುವಂತೆ ಮಾಡಿದ್ದ ಎಂಬ ಮಾಹಿತಿ ಈಗ ಹೊರಬಿದ್ದಿದೆ. ಆರೋಪಿಯ ಪಕ್ಕದಲ್ಲಿ ಕುಳಿತಿದ್ದ ವೈದ್ಯ ಸುಗತ ಭಟ್ಟಾಚಾರ್ಜಿ ವಿಮಾನಯಾನ ಸಂಸ್ಥೆಗೆ ತಾವು ಬರೆದ ಲಿಖಿತ ದೂರಿನಲ್ಲಿ ಅಂದು ನಡೆದ ಘಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ.
ಕಳೆದ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ (AI-102) ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪದ ಮೇಲೆ ಶಂಕರ್ ಮಿಶ್ರಾ ಎಂಬಾತನನ್ನು ಶುಕ್ರವಾರ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಮಿಶ್ರಾ ಪಕ್ಕದಲ್ಲಿ ಅಮೆರಿಕದ ಮೂಲಕ ವೈದ್ಯ ಸುಗತ ಭಟ್ಟಾಚಾರ್ಜಿ ಕುಳಿತಿದ್ದರು. ಈ ವೇಳೆ ಆರೋಪಿ ಎಸಗಿರುವ ಕೃತ್ಯವನ್ನು ತಮ್ಮ ದೂರಿನಲ್ಲಿ ಅವರು ವಿವರಿಸಿದ್ದಾರೆ.
ಸುಗತ ಲಿಖಿತ ದೂರಿನಲ್ಲೇನಿದೆ?: ವಿಮಾನದ ಬಿಸಿನೆಸ್ ಕ್ಲಾಸ್‌ನ ಮೊದಲ ಸಾಲಿನಲ್ಲಿ ನಾನು 8 ಎ (ಕಿಟಕಿ) ಸೀಟಿನಲ್ಲಿ ಕುಳಿತಿದ್ದೆ. ಆರೋಪಿ ಶಂಕರ್ ಮಿಶ್ರಾ ಪಕ್ಕದ 8 ಸಿ ಸೀಟಿನಲ್ಲಿ ಕುಳಿತಿದ್ದ. ನನ್ನ ಪಕ್ಕದಲ್ಲಿದ್ದ ಆರೋಪಿ ಮಿಶ್ರಾ ಮಧ್ಯಾಹ್ನದ ಊಟದ ಸಮಯದಲ್ಲಿ ನಾಲ್ಕು ಗ್ಲಾಸ್ ಸಿಂಗಲ್ ಮಾಲ್ಟ್ ವಿಸ್ಕಿಯನ್ನು ಹೊಟ್ಟೆಗಿಳಿಸಿದ್ದ. ಇದರಿಂದ ಆದಾಗಲೇ ತುಂಬಾ ಆತನಿಗೆ ಅಮಲೇರಿತ್ತು. ಹೀಗಾಗಿ ನಾನು ಮಿಶ್ರಾಗೆ ಹೆಚ್ಚಿನ ಮದ್ಯವನ್ನು ನೀಡುವುದನ್ನು ನಿಲ್ಲಿಸುವಂತೆ ವಿಮಾನ ಸಿಬ್ಬಂದಿಯನ್ನು ಕೇಳಿಕೊಂಡಿದ್ದೆ ಎಂದು ಸುಗತ ಭಟ್ಟಾಚಾರ್ಯ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಮಧ್ಯಾಹ್ನದ ಊಟವನ್ನು ಬಡಿಸಿದ ಸ್ವಲ್ಪ ಸಮಯದ ನಂತರ ಲೈಟ್‌ಗಳನ್ನು ಸ್ವಿಚ್ ಆಫ್ ಮಾಡಲಾಯಿತು. ಇದಾದ ನಂತರ ಕುಡಿದ ನಶೆಯಲ್ಲಿದ್ದ ಆರೋಪಿ ವಯಸ್ಸಾದ ಮಹಿಳೆಯ ಆಸನ (9ಎ)ದ ಕಡೆ ತೆರಳಿ, ತನ್ನ ಪ್ಯಾಂಟ್ನ ಜೀಪ್ ಬಿಚ್ಚಿ ಆ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಶೌಚಾಲಯವು ಅಲ್ಲಿಂದ ಕೇವಲ ನಾಲ್ಕು ಹೆಜ್ಜೆಗಳ ಮುಂದಿತ್ತು. ಆದರೆ, ನಶೆಯಲ್ಲಿದ್ದ ಆರೋಪಿಯು ನನ್ನ ಮೇಲೂ ಬಿದ್ದ. ನಾನು ಆಗ ಆರೋಪಿಯು ತನ್ನ ಬ್ಯಾಲೆನ್ಸ್ ಕಳೆದುಕೊಂಡಿದ್ದಾನೆ ಎಂದು ಆರಂಭದಲ್ಲಿ ಭಾವಿಸಿದ್ದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಮತ್ತೊಂದು ಮೂತ್ರ ವಿಸರ್ಜನೆ ಕೇಸ್.. ಮಹಿಳೆಯ ಹೊದಿಕೆ ಮೇಲೆ ಕುಡಿದ ನಶೆಯಲ್ಲಿ ಯೂರಿನ್
ಆದಾಗ್ಯೂ, ನಾನು ವಿಶ್ರಾಂತಿ ಕೊಠಡಿಗೆ ಹೋಗುತ್ತಿರುವಾಗ, 9ಎ ಮತ್ತು 9ಸಿ ಸೀಟಿನಲ್ಲಿ ಕುಳಿತಿದ್ದ ಇತರ ಇಬ್ಬರು ಸಹ ಪ್ರಯಾಣಿಕರು ಸಹ ಆರೋಪಿಯಿಂದ ವರ್ತನೆಯಿಂದ ಅಸಮಾಧಾನಗೊಂಡಿದ್ದರು. 9ಎ ಸೀಟಿನಲ್ಲಿ ಮಹಿಳೆ ಎದ್ದು ಗ್ಯಾಲರಿ ಪ್ರದೇಶಕ್ಕೆ ಬಂದಾಗ ಆಕೆ ಮೇಲೆ ಆರೋಪಿ ಮೂತ್ರ ವಿಸರ್ಜನೆ ಮಾಡಿದ್ದರಿಂದ ಒದ್ದೆಯಾಗಿದ್ದಳು. ಈ ಎಲ್ಲ ಸಮಯದಲ್ಲಿ ಇಬ್ಬರು ಗಗನಸಖಿಯರು ಅವರ ಸಹಾಯಕ್ಕೆ ಬಂದರು. ಅವರ ಬಟ್ಟೆಗಳನ್ನು ಬದಲಾಯಿಸಲು ಮತ್ತು ವಸ್ತುಗಳು ಹಾಗೂ ಆಸನವನ್ನು ಗಗನಸಖಿಯರು ಸ್ವಚ್ಛಗೊಳಿಸಿದರು ಎಂದು ವಿವರಿಸಿದ್ದಾರೆ.
ಆದರೆ, ವಿಮಾನದ ಕ್ಯಾಪ್ಟನ್ ಸಂತ್ರಸ್ತೆಗೆ ಬೇರೆಯೊಂದು ಸೀಟು ನಿಗದಿಪಡಿಸುವ ಎರಡು ಗಂಟೆಗಳ ಕಾಲ ಆಕೆಯುನ್ನು ಕಾಯುವಂತೆ ಮಾಡಿದ್ದರು. ಅಲ್ಲದೇ, ಇದಕ್ಕೂ ಮೊದಲು 20 ನಿಮಿಷಗಳ ಕಾಲ ಅವರು ನಿಂತುಕೊಂಡೇ ಇದ್ದರು. ಬಿಸಿನೆಸ್ ಕ್ಲಾಸ್‌ನಲ್ಲಿ ಯಾವುದೇ ಸೀಟು ಖಾಲಿಯಿಲ್ಲದ ಕಾರಣ ವಿಮಾನಯಾನ ಸಿಬ್ಬಂದಿ ಬಳಸುವ ಸಣ್ಣ ಸೀಟು ನೀಡಲಾಯಿತು. ಹೀಗೆ ಸುಮಾರು ಎರಡು ಗಂಟೆಗಳ ಕಾಲ ಚಿಕ್ಕ ಸೀಟಿನಲ್ಲಿ ಕುಳಿತಿದ್ದರು. ಇದಲ್ಲದೇ, ಆರೋಪಿ ಮೂತ್ರ ವಿಸರ್ಜನೆ ಮಾಡಿದ್ದ ಸೀಟಿಗೆ ಮರಳಲು ಆ ಮಹಿಳೆಗೆ ಸೂಚನೆ ನೀಡಲಾಗಿತ್ತು. ಆದರೆ, ಇದಕ್ಕೆ ಆ ಮಹಿಳೆ ನಿರಾಕರಿಸಿದಾಗ ಉಳಿದ ಪ್ರಯಾಣಕ್ಕಾಗಿ ಉಸ್ತುವಾರಿ ಸೀಟು ನೀಡಲಾಯಿತು ಎಂದು ಸುಗತ ಭಟ್ಟಾಚಾರ್ಯ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗೆ ನ್ಯಾಯಾಂಗ ಬಂಧನ: ಇತ್ತ, ಈ ಪ್ರಕರಣದಲ್ಲಿ ಬಂಧಿತನಾದ ಆರೋಪಿ ಶಂಕರ್ ಮಿಶ್ರಾಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಶನಿವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿದ್ದ ದೆಹಲಿ ಪೊಲೀಸರು ಮೂರು ದಿನಗಳ ತಮ್ಮ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ, ಆರೋಪಿ ಮಿಶ್ರಾ ಪರ ವಾದ ಮಂಡಿಸಿದ ವಕೀಲರು, ಎಫ್‌ಐಆರ್‌ನಲ್ಲಿ ಕೇವಲ ಒಂದು ಜಾಮೀನು ರಹಿತ ಅಪರಾಧವನ್ನು ಉಲ್ಲೇಖಿಸಲಾಗಿದೆ. ಇತರ ಜಾಮೀನು ನೀಡಬಹುದಾದ ಅಪರಾಧಗಳಾಗಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿ ಬೆಂಗಳೂರಿನಲ್ಲಿ ಬಂಧನ