ನವದೆಹಲಿ (ಭಾರತ): ಟಿಬೆಟಿಯನ್ ಆಧ್ಯಾತ್ಮಿಕ ಗುರುವಿಗೆ ದಲೈ ಲಾಮಾ ಅವರನ್ನು ತಮ್ಮ ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದು ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಆದರೆ, ದಲೈಲಾಮಾ ಅವರು ಸಂಸ್ಥೆಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದರು. ಎಐಐಎಂಎಸ್-ದೆಹಲಿಯ ವೈದ್ಯರು, ಅವರು ತಂಗಿರುವ ರಾಷ್ಟ್ರ ರಾಜಧಾನಿಯ ಹೋಟೆಲ್‌ನಲ್ಲಿ ಅವರನ್ನು ಪರೀಕ್ಷಿಸಿದ್ದಾರೆ ಎಂದು ಆಧ್ಯಾತ್ಮಿಕ ನಾಯಕನಿಗೆ ನಿಕಟ ಮೂಲಗಳು ತಿಳಿಸಿವೆ.
''ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈಲಾಮಾ ಅವರು ವೈದ್ಯಕೀಯ ತಪಾಸಣೆಗಾಗಿ ದೆಹಲಿಯಲ್ಲಿದ್ದಾರೆ'' ಎಂದು ನಿನ್ನೆ, ಅವರ ಆಪ್ತ ಕಾರ್ಯದರ್ಶಿ ಚಿಮಿ ರಿಗ್ಜಿನ್ ಧರ್ಮಶಾಲಾದಲ್ಲಿ ಹೇಳಿದ್ದಾರೆ. ''ದಲೈ ಲಾಮಾ ಅವರು ನಿರಂತರ ಶೀತದಿಂದ ಬಳಲುತ್ತಿದ್ದರು. ಚಿಂತಿಸಬೇಕಾಗಿಲ್ಲ ಮತ್ತು ಅವರು ಇನ್ನೆರಡು-ಮೂರು ದಿನಗಳಲ್ಲಿ ಧರ್ಮಶಾಲಾಗೆ ಮರಳುತ್ತಾರೆ'' ಎಂದು ರಿಗ್ಜಿನ್ ತಿಳಿಸಿದ್ದಾರೆ.
ಭಾನುವಾರ, ದಲೈ ಲಾಮಾ ಅವರ ಕಚೇರಿಯು ಈಶಾನ್ಯ ರಾಜ್ಯದಲ್ಲಿ ಇತ್ತೀಚಿನ ಪ್ರವಾಹ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ತಿಂಗಳ ಕೊನೆಯಲ್ಲಿ ಸಿಕ್ಕಿಂಗೆ ಅವರ ಉದ್ದೇಶಿತ ಭೇಟಿಯನ್ನು ಟಿಬೆಟಿಯನ್ ಆಧ್ಯಾತ್ಮಿಕ ಮುಖ್ಯಸ್ಥರು ಮುಂದೂಡಿದ್ದಾರೆ ಎಂದು ಅವರು ತಿಳಿಸಿದರು. ಅಕ್ಟೋಬರ್ 16 ರಿಂದ 22ರ ವರೆಗೆ ಗ್ಯಾಂಗ್ಟಕ್ ಮತ್ತು ಸಾಲುಗರಕ್ಕೆ ದಲೈ ಲಾಮಾ ಅವರ ಯೋಜಿತ ಭೇಟಿಯನ್ನು ಮುಂದಿನ ಸೂಚನೆ ಬರುವವರೆಗೆ ಮುಂದೂಡಲಾಗಿದೆ ಎಂದು ಅವರ ಕಚೇರಿ ಪ್ರಕಟಣೆ ತಿಳಿಸಿದೆ. ಬುಧವಾರ ಮುಂಜಾನೆ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹವು ಸಿಕ್ಕಿಂನ ನಾಲ್ಕು ಜಿಲ್ಲೆಗಳಲ್ಲಿ ಇದುವರೆಗೆ 41,870 ಜನರ ಮೇಲೆ ಪರಿಣಾಮ ಉಂಟಾಗಿದೆ.
ನರ್ಗೆಸ್ ಮೊಹಮ್ಮದಿಗೆ ಅಭಿನಂದಿಸಿದ್ದ ದಲೈ ಲಾಮಾ: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಇರಾನ್ ಕಾರ್ಯಕರ್ತ ನರ್ಗೆಸ್ ಮೊಹಮ್ಮದಿಯನ್ನು ದಲೈ ಲಾಮಾ ಶನಿವಾರ ಅಭಿನಂದಿಸಿದ್ದರು. ಇರಾನ್‌ನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ವಿರುದ್ಧದ ಹೋರಾಟ ಹಾಗೂ ಸಮಾನ ಮಾನವ ಹಕ್ಕುಗಳು, ಸ್ವಾತಂತ್ರ್ಯವನ್ನು ಉತ್ತೇಜಿಸುವ ಅವಿರತ ಹೋರಾಟ ಮಾಡಿದ ನರ್ಗೆಸ್ ಮೊಹಮ್ಮದಿಗೆ ಈ ಪ್ರಶಸ್ತಿ ನೀಡಲಾಗಿದೆ. ನರ್ಗಿಸ್ ಮೊಹಮ್ಮದಿ ಪ್ರಸ್ತುತ ಇರಾನ್‌ನಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಶನಿವಾರ ನರ್ಗೆಸ್ ಅವರಿಗೆ ಬರೆದ ಪತ್ರದಲ್ಲಿ ''ಈ ಪ್ರಶಸ್ತಿಯು ಜನರ ಜೀವನದಲ್ಲಿ ಮಹಿಳೆಯರು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸುತ್ತದೆ. ಜಗತ್ತಿನಲ್ಲಿ ಬದಲಾವಣೆಯ ಬಯಕೆ ಹೆಚ್ಚುತ್ತಿದೆ. ಈ ಬದಲಾವಣೆಯು ಸಂಭಾಷಣೆ ಮತ್ತು ಅಹಿಂಸೆಯ ಮೂಲಕ ಸಂಘರ್ಷಗಳನ್ನು ಪರಿಹರಿಸುತ್ತದೆ. ಇಂದು, ಪ್ರಜಾಪ್ರಭುತ್ವದ ಮೌಲ್ಯಗಳು, ಪಾರದರ್ಶಕತೆ, ಮಾನವ ಹಕ್ಕುಗಳಿಗೆ ಗೌರವ ಮತ್ತು ಸಮಾನತೆಯ ಮೌಲ್ಯಗಳನ್ನು ಸಾರ್ವತ್ರಿಕ ಮೌಲ್ಯಗಳೆಂದು ಎಲ್ಲಾ ಕಡೆ ಗುರುತಿಸಲಾಗಿದೆ. ಅದು ನಮಗೆಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ'' ಎಂದು ತಿಳಿಸಿದ್ದರು.
ಇದನ್ನೂ ಓದಿ: ಐಎಸ್ಎಲ್ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ.. ನೀತಾ ಅಂಬಾನಿ ಮೆಚ್ಚುಗೆ