ಭೋಪಾಲ್(ಮಧ್ಯಪ್ರದೇಶ): ಪ್ರತಿಯೊಬ್ಬ ಮನುಷ್ಯನೂ ಪ್ರತಿ ಸಮಯದಲ್ಲಿ ಏನನ್ನಾದರೂ ಕಲಿಯುತ್ತಿರುತ್ತಾನೆ. ಇನ್ನು ಆ ಕಲಿಕೆಗೆ ವಯಸ್ಸಿನ ಮಿತಿಯಿರುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಮಧ್ಯಪ್ರದೇಶದ ದೇವಾಸ್ನಲ್ಲಿರುವ ರೇಶ್ಮಾ ಬಾಯಿ ಎಂಬ 90 ವರ್ಷದ ವೃದ್ಧೆ ಕಾರು ಓಡಿಸಲು ತರಬೇತಿ ಪಡೆದು ಇದೀಗ ಎಲ್ಲರಂತೆ ಡ್ರೈವಿಂಗ್ ಮಾಡುತ್ತಿದ್ದಾರೆ.
ದೇವಾಸ್ ನಗರದಿಂದ ಸುಮಾರು 7 ಕಿಮೀ ದೂರದಲ್ಲಿರುವ ಬಿಲಾವಲಿ ಗ್ರಾಮದಲ್ಲಿ ತರಬೇತಿ ಪಡೆದ ರೇಶ್ಮಾ ಬಾಯಿ ಚಾಲಕರು ಓಡಿಸಿದಂತೆ ತನ್ನ ಕಾರನ್ನು ಚಲಾಯಿಸುತ್ತಾರೆ. ಇತ್ತೀಚೆಗೆ ರೇಶ್ಮಾ ಬಾಯಿ ತನ್ನ ಕಾರನ್ನು ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕೃಷಿಗೂ ಸೈ... ಮಾಡರ್ನ್ ಲೈಫ್ಸ್ಟೈಲ್ಗೂ ಸೈ:
ಕಾರು ಚಲಾವಣೆ ಮಾತ್ರವಲ್ಲ ಎಲ್ಲರಂತೆ ಆ್ಯಂಡ್ರಾಯ್ಡ್ ಫೋನ್ ಕೂಡ ಬಳಸುತ್ತಾರೆ. ಆಧುನಿಕತೆ ಜೊತೆಗೆ ಕೃಷಿ, ಹೈನುಗಾರಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನೊಂದು ಆಶ್ಚರ್ಯಕರ ವಿಷಯ ಎಂದರೆ ಇವರು ಮೊದಲು ಟ್ರ್ಯಾಕ್ಟರ್ ಓಡಿಸುತ್ತಿದ್ದರಂತೆ.
ಇದನ್ನು ಓದಿ: ವ್ಯಾಪಾರ, ಸಾಂಸ್ಕೃತಿಕ ಒಪ್ಪಂದಗಳ ಬಗ್ಗೆ ಜಪಾನ್ ಪ್ರಧಾನಿಯೊಂದಿಗೆ ಚರ್ಚಿಸಿದ ಪ್ರಧಾನಿ ಮೋದಿ
90ನೇ ಇಳಿವಯಸ್ಸಿನಲ್ಲಿಯೂ ರೇಶ್ಮಾ ಬಾಯಿ ತನ್ನ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಬೆಳಗ್ಗೆ ಎದ್ದು ಮನೆಯ ಕೆಲಸಗಳನ್ನು ಮಾಡಿ ಬಳಿಕ ಪೂಜೆ ಮಾಡುತ್ತಾರಂತೆ. ಇದಾದ ನಂತರ ತೋಟಕ್ಕೆ ಹೋಗಿ ಅಲ್ಲಿನ ಕೆಲಸಗಳನ್ನೂ ಸಹ ಪೂರೈಸುತ್ತಾರೆ. ರೇಶ್ಮಾ ಬಾಯಿ ಅವರಿಗೆ ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರೆಲ್ಲರೂ ಮದುವೆಯಾಗಿದ್ದಾರೆ.
3 ತಿಂಗಳಲ್ಲಿ ಕಾರು ಓಡಿಸಲು ಕಲಿತ ವೃದ್ಧೆ...
ರೇಶ್ಮಾ ಬಾಯಿ ಕೇವಲ 3 ತಿಂಗಳಲ್ಲಿ ಕಾರು ಓಡಿಸಲು ಕಲಿತರಂತೆ. ಅವರ ಮಗನೇ ಡ್ರೈವಿಂಗ್ ತರಬೇತಿಯನ್ನು ನೀಡಿದ್ದಾರೆ. ಇನ್ನು ಇದೀಗ ರೇಶ್ಮಾ ಬಾಯಿ ಒಬ್ಬ ಅನುಭವಿ ಚಾಲಕನಿಗಿಂತ ಉತ್ತಮವಾಗಿ ಕಾರನ್ನು ಚಲಾವಣೆ ಮಾಡುತ್ತಾರೆ.