ಪಾಟ್ನಾ: ಸಿಟಿಇಟಿ ಮತ್ತು ಬಿಟಿಇಟಿಯಲ್ಲಿ ಉತ್ತೀರ್ಣರಾದ ನೂರಾರು ಶಿಕ್ಷಕ ಆಕಾಂಕ್ಷಿಗಳು ಉದ್ಯೋಗಕ್ಕಾಗಿ ಒತ್ತಾಯಿಸಿ ಪಾಟ್ನಾದ ಡಾಕ್ ಬಂಗ್ಲೆ ಚೌರಾಹಾದ ಬೀದಿಗಳಲ್ಲಿ ಜಮಾಯಿಸಿದ್ದ ವೇಳೆ ಒಬ್ಬ ಶಿಕ್ಷಕ ಆಕಾಂಕ್ಷಿಗೆ ಎಡಿಎಂ ಅಮಾನುಷವಾಗಿ ಥಳಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಎಡಿಎಂ ಕೆ ಕೆ ಸಿಂಗ್ ಎಂದು ಗುರುತಿಸಲಾದ ಅಧಿಕಾರಿ ಪ್ರತಿಭಟನಾಕಾರರ ಮೇಲೆ ಲಾಠಿಯಿಂದ ಹಲ್ಲೆ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆಕಾಂಕ್ಷಿಯು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ನೆಲದ ಮೇಲೆ ಮಲಗಿದ್ದು, ಎಡಿಎಂ ಮನಬಂದಂತೆ ಲಾಠಿಯಿಂದ ಹೊಡೆದು, ಮುಖ, ತಲೆಯಲ್ಲಿ ರಕ್ತಸ್ರಾವ ಆಗುತ್ತಿರುವುದನ್ನು ಕಾಣಬಹುದು.
ಎಡೆಬಿಡದೆ ಆಕಾಂಕ್ಷಿಯನ್ನು ಹೊಡೆಯುತ್ತಿದ್ದ ಅಧಿಕಾರಿ ತ್ರಿವರ್ಣ ಧ್ವಜಕ್ಕೆ ಅಗೌರವಗೊಳಿಸಿದ್ದು, ಕೆಲವೇ ಹೊತ್ತಿನಲ್ಲಿ ಪೊಲೀಸರು ಪ್ರತಿಭಟನಾಕಾರರ ಕೈಯಿಂದ ರಾಷ್ಟ್ರಧ್ವಜವನ್ನು ಕಿತ್ತುಕೊಂಡಿದ್ದಾರೆ. ಪ್ರತಿಭಟನಾಕಾರನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ವರದಿಗಳ ಪ್ರಕಾರ, ಮಾಧ್ಯಮದವರು ಅಧಿಕಾರಿಯನ್ನು ಪ್ರಶ್ನಿಸಲು ಪ್ರಯತ್ನಿಸಿದಾಗ, ಮಾಧ್ಯಮದವರಿಗೆ ಸರಿಯಾಗಿ ಉತ್ತರಿಸದೆ ವಾಗ್ವಾದ ನಡೆಸಿದ್ದು, ಪ್ರತಿಭಟನಾಕಾರರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಘೋಷಣೆ ಕೂಗುತ್ತಿದ್ದದ್ದು ನನಗೆ ಕೋಪ ತರಿಸಿತು ಎಂದು ಅಧಿಕಾರಿ ಹೇಳಿದ್ದಾರೆ. ಘಟನೆಯ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಸುಮಾರು 80,000 ಮಂದಿ ವೀಕ್ಷಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ವಕ್ತಾರ ಅಸಿತ್ ನಾಥ್ ತಿವಾರಿ ಈ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದು, ಉನ್ನತ ಮಟ್ಟದ ಖ್ಯಾತಿ ಹೊಂದಿರುವ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಧಿಕಾರಿ ಕೆ ಕೆ ಸಿಂಗ್, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರು ಪಾತ್ರೆಗಳನ್ನು ಹೊಡೆಯುವ ವಿಡಿಯೋ ಮಾಡಬೇಕು. ಇಲ್ಲವಾದರೆ ಅವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಾಗರಿಕರಿಗೆ ಆದೇಶ ನೀಡಿದ್ದರು ಎಂದು ತಿವಾರಿ ಆರೋಪಿಸಿದ್ದಾರೆ.
ಯುವಕನು ಕಲ್ಲು ತೂರಾಟದಲ್ಲಿ ಅಥವಾ ಯಾವುದೇ ರೀತಿಯ ದೈಹಿಕ ಹಿಂಸೆಯಲ್ಲಿ ಭಾಗಿಯಾಗಿದ್ದರೆ ಸರಿ. ಆದರೆ ಅದು ಯಾವುದನ್ನೂ ಮಾಡದೆ ತ್ರಿವರ್ಣ ಧ್ವಜ ಹಿಡಿದ ಯುವಕನನ್ನು ಥಳಿಸಿರುವುದು ಸ್ವೀಕಾರಾರ್ಹವಲ್ಲ ಮತ್ತು ಸಂಬಂಧಪಟ್ಟ ಅಧಿಕಾರಿಯನ್ನು ಶಿಕ್ಷಿಸಬೇಕು ಎಂದು ತಿವಾರಿ ಆಗ್ರಹಿಸಿದ್ದಾರೆ.
ಆರೋಪಗಳನ್ನು ಮತ್ತು ವಿಡಿಯೊ ತುಣುಕನ್ನು ಪರಿಶೀಲಿಸಲು ಆಡಳಿತವು ಇಬ್ಬರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದೆ. ಸಮಿತಿಯು ಎರಡು ದಿನಗಳಲ್ಲಿ ವರದಿ ಸಲ್ಲಿಸಲಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು. ಅದರಂತೆ ಪ್ರತಿಭಟನೆಯಲ್ಲಿ ಭಾಗವಹಿಸುವವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು. ಡಾಕ್ ಬಂಗಲೆ ಕ್ರಾಸಿಂಗ್‌ನಲ್ಲಿ ಯಾವುದೇ ಮೆರವಣಿಗೆಗಳಿಗೆ ಅನುಮತಿಸಲಾಗುವುದಿಲ್ಲ. ಭಾಗವಹಿಸಿದ್ದಲ್ಲಿ ಪ್ರತಿಭಟನಾಕಾರರ ಮೇಲೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ ಕೋರಿ ಪ್ರತಿಭಟನೆ