ಮುಂಬೈ(ಮಹಾರಾಷ್ಟ್ರ): ಪ್ರವಾದಿ ಮುಹಮ್ಮದ್ ಕುರಿತು ಕಾಮೆಂಟ್ ಮಾಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದ ಅಮರಾವತಿ ಮೂಲದ ಉಮೇಶ್ ಕೊಲ್ಹೆ ಹತ್ಯೆಯಾಗಿತ್ತು. ಪ್ರಕರಣದ ಎಲ್ಲ ಆರೋಪಿಗಳನ್ನು ಸದ್ಯ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಆರೋಪಿ ಶಾರುಖ್ ಪಠಾಣ್‌ಗೆ ಜೈಲಿನ ಇತರ ಕೈದಿಗಳು ಥಳಿಸಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ.
ಆರ್ಥರ್ ರೋಡ್ ಜೈಲಿನಲ್ಲಿ ಶಾರುಖ್ ಪಠಾಣ್ ಮತ್ತು ಇತರ ಕೈದಿಗಳು ಮಾತನಾಡುತ್ತಿದ್ದರು. ಆ ವೇಳೆ ಯಾರನ್ನು ಯಾವ ಕಾರಣಕ್ಕೆ ಬಂಧಿಸಲಾಗಿದೆ ಎಂಬ ಬಗ್ಗೆ ಅವರ ನಡುವೆ ಚರ್ಚೆ ನಡೆದಿದೆ. ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಉಮೇಶ್ ಕೊಲ್ಹೆಯ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಶಾರುಖ್ ಪಠಾಣ್ ಹೇಳಿದ್ದಾನೆ.
ಆ ವೇಳೆ ಆರೋಪಿಗಳಾದ ಕಲ್ಪೇಶ್ ಪಟೇಲ್, ಹೇಮಂತ್ ಮನೇರಿಯಾ, ಅರವಿಂದ್ ಯಾದವ್, ಶ್ರವಣ್ ಚವ್ಹಾಣ್ ಅಲಿಯಾಸ್ ಅವನ್ ಮತ್ತು ಸಂದೀಪ್ ಜಾಧವ್ ಸೇರಿಕೊಂಡು ಶಾರುಖ್ ಪಠಾಣ್ ಮೇಲೆ ಹಲ್ಲೆ ನಡೆಸಿದ್ದಾರೆ. ನೂಪುರ್ ಶರ್ಮಾ ಹೇಳಿಕೆ ವಿವಾದ ಇದೀಗ ಜೈಲಿನಲ್ಲೂ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ನೋಯ್ಡಾದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆ
ಆರ್ಥರ್ ರೋಡ್ ಜೈಲಿನ ಸರ್ಕಲ್ ನಂ.11ರ ಬ್ಯಾರಕ್ ನಂ.2ರಲ್ಲಿ ಈ ಗಲಾಟೆ ನಡೆದಿದೆ. ಈ ಬಗ್ಗೆ ಮಾಹಿತಿ ಪಡೆದ ಜೈಲು ಭದ್ರತಾ ಸಿಬ್ಬಂದಿ ತಕ್ಷಣ ಪಠಾಣ್ನನ್ನು ಇತರ ಆರೋಪಿಗಳಿಂದ ಬೇರ್ಪಡಿಸಿದರು. ಪಠಾಣ್ ಕೈ ಮತ್ತು ಕುತ್ತಿಗೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಜೈಲು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಆರ್ಥರ್ ರೋಡ್ ಜೈಲು ಆಡಳಿತ ಪಠಾಣ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಸ್ಥಳೀಯ ಜೋಶಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕಾರಾಗೃಹದ ಅಧಿಕಾರಿ ಅಮೋಲ್ ಚೌರೆ ಅವರ ದೂರಿನ ಮೇರೆಗೆ ಪೊಲೀಸರು ಜೈಲಿಲ್ಲಿ ಶಾಂತಿ ಕದಡುವ ಮತ್ತು ಥಳಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 143, 147, 149, 323 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ (ಜುಲೈ 23) ಈ ಘಟನೆ ನಡೆದಿದ್ದು, ಮಂಗಳವಾರ (26) ರಾತ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.