ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಆಧಾರ್ ಪರಿಷ್ಕರಣೆಯ ಹೊಸ ವಿಧಾನವನ್ನು ಪರಿಚಯಿಸಿದೆ. ಕುಟುಂಬದ ಮುಖ್ಯಸ್ಥರ ಒಪ್ಪಿಗೆಯ(HOF) ಮೇರೆಗೆ ಆನ್‌ಲೈನ್‌ನಲ್ಲಿ ಆಧಾರ್ನ ವಿಳಾಸವನ್ನು ನವೀಕರಿಸಲು ಅವಕಾಶ ನೀಡಲಾಗಿದೆ. ಅಂದರೆ, ಯಾವುದೋ ಕೆಲಸದ ನಿಮಿತ್ತ ಮೂಲ ನಿವಾಸದಿಂದ ವರ್ಗವಾಗಿ ಬೇರೊಂದು ಕಡೆ ನೆಲೆಸಿದಲ್ಲಿ(ವಲಸೆ ಕಾರ್ಮಿಕರು) ಆಧಾರ್ ಕಾರ್ಡ್ನ ವಿಳಾಸವನ್ನು ಬದಲಿಸಲು ಆ ಕುಟುಂಬದ ಮುಖ್ಯಸ್ಥರ ಅನುಮತಿ ಪಡೆದು ಆನ್ಲೈನ್ನಲ್ಲಿಯೇ ಪರಿಷ್ಕರಣೆ ಮಾಡಬಹುದಾಗಿದೆ ಎಂದು ಯುಐಡಿಎಐ ಅಧಿಕೃತ ಹೇಳಿಕೆ ತಿಳಿಸಿದೆ.
ಸಂಬಂಧಿಸಿದ ವ್ಯಕ್ತಿ ರೇಷನ್ ಕಾರ್ಡ್, ಅಂಕಗಳ ಪ್ರಮಾಣಪತ್ರ , ಮದುವೆ ಪ್ರಮಾಣಪತ್ರ, ಪಾಸ್‌ಪೋರ್ಟ್ ಸೇರಿದಂತೆ ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಸಿದ ನಂತರ ಅರ್ಜಿದಾರರ ಮತ್ತು ಕುಟುಂಬದ ಮುಖ್ಯಸ್ಥರ (HOF) ಹೆಸರು ಮತ್ತು ಅವರ ನಡುವಿನ ಸಂಬಂಧವನ್ನು ನಮೂದಿಸಿದ ನಂತರ ಹೊಸ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಇದಕ್ಕಾಗಿ ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ದೃಢೀಕರಣದ ಅಗತ್ಯವಿರುತ್ತದೆ. ಒಂದು ವೇಳೆ ಅರ್ಜಿದಾರ ಸಲ್ಲಿಸಿದ ಮಾಹಿತಿ ಸರಿ ಹೊಂದಿಲ್ಲ ಎಂದಾದಲ್ಲಿ ಅಂತಹ ಆಯ್ಕೆಯನ್ನು ಕುಟುಂಬದ ಮುಖ್ಯಸ್ಥ(ಎಚ್ಎಫ್ಒ) ಪರಿಷ್ಕರಣೆ ಮನವಿಯನ್ನು ತಿರಸ್ಕರಿಸುವ ಅಧಿಕಾರವನ್ನು ಹೊಂದಿದ್ದಾನೆ.
ಇದರಿಂದ ಲಾಭವೇನು?: ಕುಟುಂಬದ ಮುಖ್ಯಸ್ಥರ ಒಪ್ಪಿಗೆಯ ಮೇರೆಗೆ ಆಧಾರ್ ತಿದ್ದುಪಡಿಯಿಂದಾಗಿ ಕುಟುಂಬವೊಂದು ಹಲವು ಕಾರಣಕ್ಕೆ ಬೇರೊಂದು ಪ್ರದೇಶದಲ್ಲಿ ವಾಸವಾಗಿದ್ದರೆ, ಅಲ್ಲಿನ ವಿಳಾಸವನ್ನು ಅಧಿಕೃತಗೊಳಿಸಬೇಕಾದಲ್ಲಿ ಇದು ನೆರವಾಗಲಿದೆ. ಅಲ್ಲದೇ, ಆಧಾರ್ ತಿದ್ದುಪಡಿ ವಂಚಿಸುವುದನ್ನು ತಡೆಯಬಹುದು ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ ತಿಳಿಸಿದೆ. ವಿಳಾಸ ತಿದ್ದುಪಡಿಗಾಗಿಯೇ ಕಚೇರಿಗಳಿಗೆ ಅಲೆಯುವುದನ್ನು ಇದು ಇಲ್ಲವಾಗಿಸುತ್ತದೆ. ವಿಳಾಸ ನವೀಕರಣಕ್ಕೆ ಕುಟುಂಬದ ಹಿರಿಯ ಮುಖ್ಯಸ್ಥರ ಒಪ್ಪಿಗೆ ನೀಡಬೇಕಾದ ಕಾರಣ ಇದು ಅಧಿಕೃತ ಪ್ರಕ್ರಿಯೆಯಾಗಿದೆ. ಈ ಸೌಲಭ್ಯದಿಂದ ವಂಚಿಸಲು ಸಾಧ್ಯವಿಲ್ಲ. 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಕುಟುಂಬ ಮುಖ್ಯಸ್ಥರ ಅನುಮತಿ ಪಡೆದು, ಆಧಾರ್ನಲ್ಲಿ ವಿಳಾಸವನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ.
ನವೀಕರಣ ವಿಧಾನ ಹೇಗೆ?: ಆಧಾರ್ ವಿಳಾಸವನ್ನು ಆನ್‌ಲೈನ್‌ನಲ್ಲಿ ನವೀಕರಿಸಬೇಕಾದರೆ, 'ಮೈ ಆಧಾರ್' ಪೋರ್ಟಲ್‌ಗೆ ಭೇಟಿ ನೀಡಬೇಕು. ಅರ್ಜಿದಾರ HOF ನ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಮೌಲ್ಯೀಕರಣ ನಡೆಯಲಿದೆ. ಈ ವೇಳೆ HOFನ ಯಾವುದೇ ಮಾಹಿತಿ ಪರದೆಯ ಮೇಲೆ ಕಾಣಸಿಗುವುದಿಲ್ಲ. ಕುಟುಂಬ ಮುಖ್ಯಸ್ಥರ ಆಧಾರ್ ಸಂಖ್ಯೆ ನಮೂದಿಸಿದ ನಂತರ, ಅರ್ಜಿದಾರ ಸಂಬಂಧಿತ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಈ ಸೇವೆಗಾಗಿ 50 ರೂಪಾಯಿ ಶುಲ್ಕ ಪಾವತಿಸಬೇಕು. ಸೇವಾ ವಿನಂತಿ ಸಂಖ್ಯೆ (SRN) ಯನ್ನು ಅರ್ಜಿದಾರ ಪಡೆಯಲಿದ್ದಾನೆ. ಬಳಿಕ ವಿಳಾಸ ಬದಲಿಸುವ ಕೋರಿಕೆಯ ಸಂದೇಶವನ್ನು ಕುಟುಂಬ ಮುಖ್ಯಸ್ಥರಿಗೆ ಕಳುಹಿಸಲಾಗುತ್ತದೆ.
ಸಂದೇಶ ಬಂದ 30 ದಿನಗಳವರೆಗೆ ಕುಟುಂಬದ ಮುಖ್ಯಸ್ಥರ ತಿದ್ದುಪಡಿ ಮನವಿಯನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ನಿಗದಿತ ಅವಧಿ(30 ದಿನ) ಮುಗಿದರೆ ತಿದ್ದುಪಡಿ ಕೋರಿಕೆ ತನ್ನಿಂತಾನೇ ರದ್ದಾಗಲಿದೆ. ಸೇವಾ ಶುಲ್ಕವನ್ನು ಅರ್ಜಿದಾರರಿಗೆ ಮರು ಪಾವತಿಸಲಾಗುವುದಿಲ್ಲ.
ಇದನ್ನೂ ಓದಿ: ಜನವರಿ 6ರಂದು ಸುಪ್ರೀಂನಲ್ಲಿ ಸಲಿಂಗ ವಿವಾಹ ಕುರಿತ ಅರ್ಜಿಗಳ ವಿಚಾರಣೆ