ಪುಣೆ: ರಾಜಕಾರಣಿಗಳಿಗೆ ಹಣ ಗಳಿಕೆಯ ವಿಧಾನ ಕರತಲಾಮಲಕ. ಅಂತಹ ಕಲೆಗಾರರಿಗೇ ಪುಣೆಯ ಯುವಕನೊಬ್ಬ ಮಕ್ಮಲ್ ಟೋಪಿ ಹಾಕಿದ್ದಾನೆ. ತಾಯಿಯ ಅನಾರೋಗ್ಯದ ನೆಪ ಹೇಳಿ ನಾಲ್ವರು ಮಹಿಳಾ ಶಾಸಕಿಯರಿಗೆ ಲಕ್ಷಾಂತರ ರೂಪಾಯಿ ಹಣ ಪೀಕಿದ್ದಾನೆ. ಈ ಬಗ್ಗೆ ಶಾಸಕಿಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳಾ ಶಾಸಕಿಯರಾದ ಬಿಜೆಪಿಯ ಮಾಧುರಿ ಮಿಸಾಲ್, ಶ್ವೇತಾ ಮಹಾಲೆ, ಮೇಘನಾ ಬೋರ್ಡಿಕರ್, ದೇವಯಾನಿ ಫರಾಂಡೆ ವಂಚನೆಗೊಳಗಾದವರು. ಮುಕೇಶ್ ರಾಥೋಡ್ ಎಂಬ ಯುವಕ ಹಣ ಪೀಕಿದ ಆರೋಪಿ.
ಮುಕೇಶ್ ರಾಥೋಡ್ ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಸಹಾಯ ಮಾಡಿ ಎಂದು ಈ ಮಹಿಳಾ ಶಾಸಕಿಯರಿಗೆ ಕರೆ ಮಾಡಿ ಅಂಗಲಾಚಿದ್ದಾನೆ. ಯುವಕನ ಪರಿಸ್ಥಿತಿಗೆ ಮರುಗಿದ ಶಾಸಕಿಯರು ತುರ್ತು ಅಗತ್ಯವೆಂದು ಗೂಗಲ್ ಪೇ ಮೂಲಕ ಹಣ ವರ್ಗಾಯಿಸಿದ್ದಾರೆ. ಬಳಿಕ ಅವರಿಗೆ ಇದೊಂದು ನಕಲಿ ಕರೆಯಾಗಿದ್ದು, ಯುವಕ ವಂಚಿಸಿದ್ದು ಗೊತ್ತಾಗಿದೆ.
ಈ ಬಗ್ಗೆ ಬಿಬ್ವೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಂಚಕ ಮುಖೇಶ್ ರಾಥೋಡ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: 200 ಕೋಟಿ ಲಸಿಕೆ ದಾಖಲೆ: ಲಸಿಕೆ ಹಾಕಿದವರಿಗೆ ಪ್ರಧಾನಿ ಮೋದಿ ಅಭಿನಂದನಾ ಪತ್ರ