ಪಾಟ್ನಾ (ಬಿಹಾರ): ಕುಟುಂಬದ ಸ್ಥಿರೀಕರಣ ಮತ್ತು ತಾಯಿ, ಮಕ್ಕಳ ಆರೋಗ್ಯ, ಮರಣ ಸಂಖ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಕುಟುಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರು ಮತ್ತೆ ಮೂರನೇ ಬಾರಿ ಗರ್ಭಿಣಿಯಾಗಿರುವ ಘಟನೆ ಬಿಹಾರದ ಮುಜಾಫರ್ಪುರ ನಗರದಲ್ಲಿ ನಡೆದಿದೆ.
ಮುಜಾಫರ್ಪುರ ಜಿಲ್ಲೆಯ ಗಯ್ಗಾಟ್ನ ನಾಲ್ಕು ಮಕ್ಕಳ ಮಹಿಳೆಯೊಬ್ಬರು 2015ರಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಳು. ಚೆಕ್-ಅಪ್ ಕ್ಯಾಪ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ 2018ರಲ್ಲಿ ಮತ್ತೆ ಗರ್ಭಿಣಿಯಾದಳು. ಈ ವಿಚಾರವನ್ನು ಆಕೆಯ ಗಂಡ ಸ್ಥಳೀಯ ಸಿವಿಲ್ ಸರ್ಜನ್ಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಮತ್ತೊಮ್ಮೆ ಆಕೆಯ ವೈದ್ಯಕೀಯ ತಪಾಸಣೆ ನಡೆಸುವ ಭರವಸೆ ನೀಡಿದ್ದರು. ಈ ಸಂದರ್ಭದಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಇದಾದ ಎರಡು ವರ್ಷದ ಬಳಿಕ ಅಂದರೆ 2020ರಲ್ಲಿ ಮತ್ತೊಮ್ಮೆ ಈಕೆ ಗರ್ಭಿಣಿಯಾಗಿದ್ದು, ಹೆಣ್ಣು ಮಗು ಜನಿಸಿತ್ತು. ಈ ಸಂದರ್ಭದಲ್ಲಿ ಮತ್ತೊಮ್ಮೆ ಸಿವಿಲ್ ಸರ್ಜನ್ಗೆ ದೂರು ನೀಡಿದಾಗ ಅವರು 6000 ರೂ. ಹಣವನ್ನು ಪರಿಹಾರವಾಗಿ ನೀಡಿದ್ದರಂತೆ.
2023ರಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಮೂರನೇ ಬಾರಿಗೆ ಮತ್ತೆ ಗರ್ಭಿಣಿಯಾಗಿದ್ದು, ಆಕೆಯ ಗಂಡ ಸಿವಿಲ್ ಸರ್ಜನ್ಗೆ ದೂರು ನೀಡಿದ್ದಾರೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ಅವಧಿಯಲ್ಲಿ ಈ ಕುಟುಂಬ ಯೋಜನೆ ಸರ್ಜರಿಗಳು ನಡೆದಿಲ್ಲ. ಈ ಹಿನ್ನೆಲೆ ಈ ಕುರಿತು ತಾವು ಏನನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದಾಗ್ಯೂ ಸಿವಿಲ್ ಸರ್ಜನ್ ಈ ವಿಚಾರದಲ್ಲಿ ತನಿಖೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಮಹಿಳೆ ಇದೀಗ ಏಳನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಪ್ರತ್ಯೇಕ ಪ್ರಕರಣ- ಕಳೆದೆರಡು ವರ್ಷದ ಹಿಂದೆ ಕೂಡ ಇದೇ ರೀತಿಯ ಪ್ರಕರಣ ಮುಜಾಫರ್ಪುರದಲ್ಲಿ ನಡೆದಿತ್ತು. ಇಲ್ಲಿನ ಮೊಟಿಪುರ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2019ರಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ 2021ರಲ್ಲಿ ಗರ್ಭಿಣಿಯಾಗಿದ್ದರು. ಈ ವೇಳೆ ಮಹಿಳೆ ಸರ್ಕಾರದ ವಿರುದ್ಧ ಜಿಲ್ಲಾ ಗ್ರಾಹಕ ವೇದಿಕೆ ಮೆಟ್ಟಿಲು ಹತ್ತಿದ್ದರು. ತಾವು ಕಷ್ಟದಲ್ಲಿದ್ದು, ಈ ಮಗುವನ್ನು ಪೋಷಿಸಲು ಸಾಧ್ಯವಿಲ್ಲ ಎಂದು ಮಹಿಳೆ ವಾದಿಸಿದ್ದರು. ಪ್ರಕರಣ ಆಲಿಸಿದ ಜಿಲ್ಲಾ ಗ್ರಾಹಕ ವೇದಿಕೆ 11 ಲಕ್ಷ ಪರಿಹಾರಕ್ಕೆ ಆದೇಶಿಸಿತು. (ಐಎಎನ್ಎಸ್)
ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ; ಡೆತ್ ನೋಟ್ನಿಂದ ಕಾರಣ ಬಹಿರಂಗ