ಕರೌಲಿ(ರಾಜಸ್ಥಾನ): ಇಲ್ಲಿಯ ನರೌಲಿ ಡ್ಯಾಂಗ್ ಎಂಬಲ್ಲಿ ಚರಂಡಿ ಅಗೆಯುವಾಗ ದೇವಸ್ಥಾನ ಕುಸಿದು ಅವಶೇಷಗಳಡಿ ಸಿಲುಕಿ ಮಹಿಳೆಯೊಬ್ಬರು ಮೃತ ಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ. ನರೌಲಿಯ ಶಿವನ ದೇವಾಲಯದ ಮುಂಭಾಗದಲ್ಲಿ ಜೆಸಿಬಿ ಯಂತ್ರದಿಂದ ಚರಂಡಿ ನಿರ್ಮಾಣ ಕಾರ್ಯಕ್ಕಾಗಿ ಭೂಮಿ ಅಗೆಯುತ್ತಿದ್ದ ವೇಳೆ ದೇವಸ್ಥಾನದ ಒಂದು ಭಾಗ ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ.
ಸೀಮಾದೇವಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಅವಶೇಷಗಳಡಿ ಸಿಲುಕಿದ್ದ ಮೂವರನ್ನು ಚಿಕಿತ್ಸೆಗಾಗಿ ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಸೀಮಾದೇವಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಸಿಂಗ್ ಮತ್ತು ಎಸ್ಪಿ ನಾರಾಯಣ್ ಸಿಂಗ್ ಟೊಂಗಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಮಾತನಾಡಿ, ಚರಂಡಿ ನಿರ್ಮಿಸುತ್ತಿದ್ದ ವೇಳೆ ಈ ಘಟನೆ ಜರುಗಿದೆ. ಒಬ್ಬರು ಮೃತ ಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಪತ್ತೆ ಹಚ್ಚಿ ಬಳಿಕ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದರು. ಇನ್ನು ಚರಂಡಿ ನಿರ್ಮಾಣ ಕಾರ್ಯ ನಡೆಯುವ ವೇಳೆ ಭಕ್ತರಿಗೆ ಬರದಂತೆ ಸೂಚಿಸಬೇಕಿತ್ತು ಎಂದು ಜನರು ಜಿಲ್ಲಾಧಿಕಾರಿ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋಮ್ವರ್ಕ್ ಮಾಡಿಲ್ಲ ಎಂದು ವಿದ್ಯಾರ್ಥಿಗೆ ಥಳಿತ: ಇನ್ನೂ ಹೋಮ್ವರ್ಕ್ ಮಾಡಿಲ್ಲವೆಂದು 8ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿ ಥಳಿಸಿದ್ದು, ವಿದ್ಯಾರ್ಥಿ ಕಣ್ಣಿಗೆ ಬಲವಾದ ಪೆಟ್ಟು ಬಿದ್ದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಘಟನೆ ಜೈಪುರ್ನ ಜೈಸಿಂಗ್‌ಪುರ ಖೋರ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ನಡೆದಿದೆ. ಘಟನೆ ನಡೆದು ಎರಡು ತಿಂಗಳ ನಂತರ ವಿದ್ಯಾರ್ಥಿಯ ಪೋಷಕರು ದೂರು ದಾಖಲಿಸಿದ್ದಾರೆ. ಈ ಗಾಗಲೇ ಬಾಲಕನ ಕಣ್ಣಿಗೆ ಎರಡು ಶಸ್ತ್ರ ಚಿಕಿತ್ಸೆಗಳಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ ವೈದ್ಯರು ಮೂರನೇ ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೇ ಬಾಲಕ ಕಣ್ಣಿನ ದೃಷ್ಟಿ ಮರಳಿ ಪಡೆಯುವುದು ಬಹುತೇಕ ಅನುಮಾನ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಣರಣದ ತನಿಖೆ ವಹಿಸುತ್ತಿರುವ ಪೊಲೀಸ್ ಅಧಿಕಾರಿ ಬಾಬುಲಾಲ್ ಮಾತನಾಡಿ, ದೆಹಲಿ ಬೈಪಾಸ್ ನಿವಾಸಿಯಾದ ನಾವೇದ್ ಎಂಬುವವರ ಮಗ ಮೊಹಮ್ಮದ್ ಅಲಿ ಖಾಸಗಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಾನೆ. ನ.3ರಂದು ಶಾಲೆಯಿಂದ ಅಲಿ ಅವರ ಮನೆಗೆ ಕರೆ ಮಾಡಿ ನಿಮ್ಮ ಮಗನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಪೋಷಕರಿಗೆ ಕರೆ ಮಾಡಿ ತಿಳಿಸಿಲಾಗಿತ್ತು. ಬಳಿಕ ಅಲಿ ತಂದೆ ಶಾಲೆಗೆ ತೆರಳಿ ತಮ್ಮ ಅಲಿಯನ್ನು ನೋಡಿದಾಗ ಎಡಗಣ್ಣಿಗೆ ಗಾಯವಾಗಿ ಊದಿಕೊಂಡಿದ್ದು ಕಂಡು ಬಂದಿದೆ.
ಕೂಡಲೇ ತಮ್ಮ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಏನಾಗಿದೆ ಎಂದು ಅಲಿಗೆ ಅವರ ತಂದೆ ಕೇಳಿದಾಗಿ ಹೋಮ್ ವರ್ಕ್ ಮಾಡದೇ ಇದ್ದಕ್ಕಾಗಿ ಶಿಕ್ಷಕಿ ಥಳಿಸಿದ್ದಾರೆ ಎಂದು ಅಲಿ ತಿಳಿಸಿದ್ದಾರೆ. ಘಟನೆ ನಡೆದು ಎರಡು ತಿಂಗಳ ಬಳಿಕ ಪೋಷಕರು ಶಿಕ್ಷಕಿ ವಿರುದ್ಧ ಪೋಷಕರು ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇನ್ನು ಬಾಲಕ ಅಲಿ ಕಣ್ಣಿಗೆ 12 ಹೊಲಿಗೆಗಳ ಹಾಕಲಾಗಿದ್ದು, ಎರಡು ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದೆ. ಮೂರನೇ ಶಸ್ತ್ರ ಚಿಕಿತ್ಸೆಯನ್ನು ಫೆಬ್ರವರಿ ಮೊದಲ ವಾರದಲ್ಲಿ ವೈದ್ಯರು ನಿಗದಿಪಡಿಸಿದ್ದಾರೆ ಎಂದು ತಿಳಿಸಿರುವ ಪೊಲೀಸ್ ಅಧಿಕಾರಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಬಿಹಾರ: ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಮಹಿಳೆ.. ಸ್ಥಿತಿ ಗಂಭೀರ