ಗುವಾಹಟಿ (ಅಸ್ಸೋಂ): ನಾಗರಿಕತೆಯ ಪ್ರಾರಂಭದಿಂದಲೂ ಮಾನವರು ಸೂರು ಕಟ್ಟಿಕೊಂಡು ಅದ್ರಲ್ಲೇ ವಾಸಿಸುತ್ತಿದ್ದಾರೆ. ಜನರು ತಮ್ಮ ಆಯ್ಕೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವಿಭಿನ್ನ ಮನೆಗಳನ್ನು ಹೊಂದಿರುತ್ತಾರೆ. ಹೀಗಿದ್ದಾಗ, ಅಸ್ಸೋಂನ ಈ ದೂರದ ಹಳ್ಳಿಯಲ್ಲಿ ಜನರು ಎತ್ತರದ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ಅಸ್ಸಾಮೀಸ್ ಭಾಷೆಯಲ್ಲಿ ಇಂತಹ ಮನೆಗಳನ್ನು ಟೋಂಗಿ ಘರ್ ಅಥವಾ ಚಾಂಗ್ ಘರ್ ಎನ್ನುತ್ತಾರೆ. ಸಾಮಾನ್ಯ ಮನೆಗಳನ್ನು ಹೊಂದಿದ್ದರೂ ಈ ಟೋಂಗಿ ಘರ್‌ಗಳನ್ನು ನಿವಾಸದ ಎದುರು ನಿರ್ಮಿಸಲಾಗಿರುತ್ತದೆ.
ಅಸ್ಸೋಂನ ಗೋಲ್ಘಾಟ್ ಮತ್ತು ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳ ಗಡಿಯಲ್ಲಿರುವ ಬರಮಹಾರಿ ಪಾಥರ ಗ್ರಾಮದ ಜನರು ಇಂತಹ ಎತ್ತರದ ಮನೆಗಳನ್ನು ನಿರ್ಮಿಸಿದ್ದಾರೆ. ಈ ಹಳ್ಳಿಯ 45 ಕುಟುಂಬಗಳು ಕಡ್ಡಾಯವಾಗಿ ಚಾಂಗ್ ಘರ್‌ಗಳನ್ನು ನಿರ್ಮಿಸಿ ಅದರಲ್ಲಿ ವಾಸಿಸುತ್ತಾರೆ. ಆಗಾಗ್ಗೆ ಈ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸುವ ಕಾರಣ ಅದಕ್ಕೆ ಪರಿಹಾರವಾಘಿ ಜನರು ಚಾಂಗ್ಘರ್ಗಳಲ್ಲಿ ವಾಸಿಸುವುದನ್ನು ರೂಢಿಸಿಕೊಂಡಿದ್ದಾರೆ.
ಹಳ್ಳಿಯ ಎಲ್ಲಾ 45 ಕುಟುಂಬಗಳ ಮೇಲೆ ಆನೆ ಹಿಂಡುಗಳ ದಾಳಿಯಿಂದ ಹಾನಿಯಾಗದಂತೆ ನೋಡಿಕೊಳ್ಳಲು ನೆಲದಿಂದ ಕನಿಷ್ಟ 25 ರಿಂದ 30 ಅಡಿ ಎತ್ತರದ ಚಾಂಗ್ ಘರ್ ಅಥವಾ ಟೋಂಗಿ ಘರ್‌ಗಳನ್ನು ನಿರ್ಮಿಸಿದ್ದಾರೆ. ಈ ಪ್ರದೇಶ ಕಾಡುಗಳಿಗೆ ಹತ್ತಿರದಲ್ಲಿರುವ ಕಾರಣ ಕಾಡಾನೆಗಳ ಹಿಂಡು ಹಳ್ಳಿಗೆ ಬರುವುದು ಸಹಜವಾಗಿದೆ.
ಹಳ್ಳಿಯ ಜನರು ಮುಸ್ಸಂಜೆಯ ನಂತರ ಚಾಂಗ್ ಘರ್ಗಳ ಮೇಲಕ್ಕೆ ಹತ್ತಿ ಮುಂಜಾನೆಯವರೆಗೂ ಅಲ್ಲಿಯೇ ಇರುತ್ತಾರೆ. ವಿದ್ಯುತ್‌ನಂತಹ ಮೂಲಸೌಕರ್ಯಗಳಿಂದ ವಂಚಿತರಾಗಿರುವ ಗ್ರಾಮದ ಜನರು ಈಗ ಗಟ್ಟಿಮುಟ್ಟಾದ ಚಾಂಗ್ ಘರ್‌ಗಳನ್ನು ನಿರ್ಮಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದರಿಂದ ಅವರು ಸುರಕ್ಷಿತವಾಗಿರುವುದು ಮಾತ್ರವಲ್ಲದೇ ಟೋಂಗಿ ಘರ್ಗೆ ಬೇಕಾಗುತ್ತಿದ್ದ ದುರಸ್ಥಿ ವೆಚ್ಚವನ್ನು ಸಹ ಉಳಿಸಬಹುದಾಗಿದೆ.