ರತ್ಲಂ, ಮಧ್ಯಪ್ರದೇಶ: ಜಿಲ್ಲೆಯಲ್ಲಿ ದುರಂತ ಘಟನೆಯೊಂದು ನಡೆದಿದೆ. ಜವ್ರಾ ತಾಲೂಕಿನ ಧೋಧರ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಕಿರಿಯ ಸಹೋದರನ ಹೆಂಡತಿಯನ್ನು ಸಜೀವವಾಗಿ ಸುಟ್ಟು ಹಾಕಿದ್ದಾನೆ. ಇದಕ್ಕೂ ಮೊದಲು ಗೃಹಿಣಿಯನ್ನು ಥಳಿಸಲಾಗಿತ್ತು. ಬಳಿಕ ಮನೆಯಿಂದ ಹೊರಗೆ ಕರೆದೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬೆಂಕಿ ತಗುಲಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸದ್ಯ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸರ ಪ್ರಕಾರ, 6 ತಿಂಗಳ ಹಿಂದೆ ನಿರ್ಮಲಾ (ಮೃತ ಮಹಿಳೆ) ಪತಿ ಪ್ರಕಾಶ್ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಗಂಡನ ಮರಣದ ನಂತರ ನಿರ್ಮಲಾ ತನ್ನ ಇಬ್ಬರು ಮಕ್ಕಳೊಂದಿಗೆ ಧೋಧರ್‌ನಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ ವಾಸಿಸುತ್ತಿದ್ದರು. ಆರೋಪಿಯು ತನ್ನ ಸಹೋದರನ ಸಾವಿಗೆ ನಿರ್ಮಲಾ ಕಾರಣ ಎಂದು ಪರಿಗಣಿಸಿದ್ದನು. ಇದೇ ಕಾರಣಕ್ಕೆ ನಿರ್ಮಲಾ ಮೇಲೆ ದ್ವೇಷ ಸಾಧಿಸುತ್ತಿದ್ದ. ‘ನನ್ನ ಸಹೋದರ ಪ್ರಕಾಶ್ ಆತ್ಮಹತ್ಯೆಗೆ ಆತನ ಪತ್ನಿ ನಿರ್ಮಲಾ ಕಾರಣ’ ಎಂದು ಆರೋಪಿ ಸುರೇಶ್ ಹೇಳಿದ್ದಾರೆ.
ಶನಿವಾರ ಆರೋಪಿ ಸುರೇಶ್ ತನ್ನ ಕಿರಿಯ ಸಹೋದರನ ಪತ್ನಿ ನಿರ್ಮಲಾ ಅವರೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಡಿದ್ದು, ಆರಂಭವಾದ ಜಗಳ ನಿಧಾನವಾಗಿ ವಿಕೋಪಕ್ಕೆ ತಿರುಗಿತ್ತು. ಮೊದಲು ಆರೋಪಿ ಸುರೇಶ್ ತಮ್ಮ ನಾದಿನಿ ಮೇಲೆ ಹಲ್ಲೆ ನಡೆಸಿ ನಂತರ ಮನೆಯಿಂದ ಹೊರಗೆ ಕರೆತಂದಿದ್ದಾನೆ. ಅಷ್ಟೇ ಅಲ್ಲ ನೋಡು ನೋಡುತ್ತಲೇ ಆರೋಪಿ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯಿಂದ ತೀವ್ರವಾಗಿ ಸುಟ್ಟು ಕರಕಲಾದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯು ಸ್ಥಳದಲ್ಲಿ ಸಂಚಲನ ಮೂಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿ ಸುರೇಶ್ನನ್ನು ವಶಕ್ಕೆ ಪಡೆದರು. ಬಳಿಕ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಾವ್ರಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಸದ್ಯ ಪೊಲೀಸರು ಪ್ರಕರಣದ ತನಿಖೆಯಲ್ಲಿ ನಿರತರಾಗಿದ್ದಾರೆ.
ಪ್ರಕಾಶ್ ಸಾವಿಗೆ ನಿರ್ಮಲಾ ಕಾರಣ ಎಂದು ಸುರೇಶ್ ನಮ್ಮ ಸಹೋದರಿಗೆ ಕಿರುಕುಳ ನೀಡುತ್ತಿದ್ದ. ಸುರೇಶ್ ಶನಿವಾರ ನಿರ್ಮಲ್ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆ ಬಳಿಕ ಆರೋಪಿ ಸುರೇಶ್ ನಮಗೆ ಕರೆ ಮಾಡಿ ನಿಮ್ಮ ತಂಗಿಗೆ ಬೆಂಕಿ ಹಚ್ಚಿದ್ದೇನೆ ಎಂದು ಹೇಳಿದ್ದಾರೆ ಅಂತಾ ನಿರ್ಮಲಾ ಸಹೋದರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪತಿಯ ಸಾವಿಗೆ ನಿರ್ಮಲಾ ಕಾರಣ ಎಂದು ಪ್ರಕಾಶ್ ಸಹೋದರ ಸುರೇಶ್ ಈ ಹಿಂದೆಯೂ ಕೊಲೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ ನಿರ್ಮಲಾ ಸಹೋದರರು ಆಕೆಯನ್ನು ಮನೆಗೆ ಕರೆತರಲು ಮುಂದಾಗುವ ಮುನ್ನವೇ ಈ ದುರ್ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಓದಿ: ಮಾನವ ಕಳ್ಳಸಾಗಣೆ ಆರೋಪಕ್ಕೆ ಸಿಗದ ಸಾಕ್ಷ್ಯ : ಕೆಲವೇ ಕ್ಷಣಗಳಲ್ಲಿ ಪ್ರಯಾಣ ಬೆಳಸಲಿರುವ 303 ಭಾರತೀಯರಿದ್ದ ವಿಮಾನ