ಚೆನ್ನೈ: ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಹಠಾತ್ ಹೃದಯಾಘಾತ ಸಂಭವಿಸಿ ಮಹಿಳಾ ಡಾಕ್ಟರೊಬ್ಬರು ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ದೇಹದ ತೂಕ ಇಳಿಸಲೆಂದು ವರ್ಕೌಟ್ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮೃತರನ್ನು ಅನ್ವಿತಾ(26) ಎಂದು ಗುರುತಿಸಲಾಗಿದೆ. ಇವರು ಚೆನ್ನೈನ ಕಿಲ್ಪಾಕ್ಕಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಮುಗಿಸಿದ್ದಾರೆ. ಖ್ಯಾತ ನೇತ್ರಶಾಸ್ತ್ರಜ್ಞರ ಪುತ್ರಿ ಅನ್ವಿತಾ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು.
ಇಂದು ಕಿಲ್ಪಾಕ್ಕಂನ ನ್ಯೂ ಅವಡಿ ರಸ್ತೆಯಲ್ಲಿರುವ ಖಾಸಗಿ ಫಿಟ್‌ನೆಸ್ ಸೆಂಟರ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ, ಇದ್ದಕ್ಕಿದ್ದಂತೆ ಕುಸಿದ ಬಿದ್ದು ಮೂರ್ಛೆ ಹೋಗಿದ್ದಾರೆ. ಇದನ್ನು ಗಮನಿಸಿದ ಜಿಮ್ ಸಿಬ್ಬಂದಿ ಕೂಡಲೇ ಅನ್ವಿತಾರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ನಂತರ ಹೆಚ್ಚಿನ ಯುವಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳ ವರದಿಯಾಗುತ್ತಿವೆ. ಕೊರೊನಾ ಲಸಿಕೆ ಪಡೆದವರಲ್ಲಿ ಹೃದಯಾಘಾತ ಸಂಭವಿಸುತ್ತಿದ್ದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ, ಹೃದಯಾಘಾತದಿಂದ ಹೆಚ್ಚಾಗುತ್ತಿರುವುದಕ್ಕೆ ಕರೋನಾ ಲಸಿಕೆ ಕಾರಣವಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇತ್ತೀಚೆಗೆ ಸ್ಪಷ್ಟಪಡಿಸಿದೆ.
ಇತ್ತೀಚಿನ ಘಟನೆಗಳು: 9ನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ತರಗತಿಯಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಅಸ್ವಸ್ಥಗೊಂಡ ವಿದ್ಯಾರ್ಥಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟೊತ್ತಿಗೆ ಮೃತಪಟ್ಟಿದ್ದ ಎಂದು ತಪಾಸಣೆ ನಡೆಸಿದ ಬಳಿಕ ವೈದ್ಯರು ತಿಳಿಸಿದ್ದರು.
ಯೋಗ ಮಾಡುತ್ತಿದ್ದ ವೇಳೆ ಹೃದಯಾಘಾತ: ಯೋಗ ಮಾಡುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಹಠಾತ್ ಆಗಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ಇತ್ತೀಚೆಗೆ ನಡೆದಿತ್ತು. 44 ವರ್ಷದ ಮುಖೇಶ್‌ಭಾಯ್ ಎಂಬುವವರು ಮೃತ ಮೃತಪಟ್ಟಿದ್ದಾರೆ.
ಪರೀಕ್ಷೆ ವೇಳೆ ವಿದ್ಯಾರ್ಥಿ ಸಾವು: ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೆಲ ದಿನಗಳ ಹಿಂದೆ ಬಾಗಲಕೋಟೆಯಲ್ಲಿ ನಡೆದಿತ್ತು. 9ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದ ಬಾಲಕ ಅರ್ಧ ವಾರ್ಷಿಕ ಪರೀಕ್ಷೆ ಬರೆಯಲು ಶಾಲೆಗೆ ಹೋದ ವೇಳೆ ಈ ಘಟನೆ ಸಂಭವಿಸಿತ್ತು. ರಾಹುಲ್ ಕೋಲಕಾರ (15) ಎಂಬ ಯುವಕ ಮೃತ ಪಟ್ಟಿದ್ದಾರೆ ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ: 'ವಿಪರೀತ ವ್ಯಾಯಾಮ ಚಟುವಟಿಕೆ ಬೇಡ': ಗಂಭೀರ ಕೋವಿಡ್ ಸಮಸ್ಯೆಗಳಿಂದ ಚೇತರಿಸಿಕೊಂಡವರಿಗೆ ವೈದ್ಯರ ಸಲಹೆ