ಮುಂಬೈ: ಫಿಸಿಯೋಥೆರಪಿ ಚಿಕಿತ್ಸೆಯ ನೆಪದಲ್ಲಿ 35 ವರ್ಷದ ವೈದ್ಯನೊಬ್ಬ 16 ವರ್ಷದ ವಿಶೇಷಚೇತನ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದ ಸಾಂತಾಕ್ರೂಜ್ ಪ್ರದೇಶದಲ್ಲಿ ನಡೆದಿದೆ.
ಸಾಂತಾಕ್ರೂಜ್ ಪೊಲೀಸರು ವೈದ್ಯ ಹರೀಶ್ ಬಡಿಗಾರ್ (35) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆ ವಿಶೇಷಚೇತನ ಬಾಲಕಿಯಾಗಿದ್ದು, 2016ರಿಂದ ಚಿಕಿತ್ಸೆಗಾಗಿ ಡಾ.ಹರೀಶ್ ಬಳಿಗೆ ಬರುತ್ತಿದ್ದಳು. ಆಕೆಯ ಅಜ್ಞಾನದ ಲಾಭ ಪಡೆದ ಹರೀಶ್ ಸಂತ್ರಸ್ತೆಯ ಮೇಲೆ ಅಕ್ಟೋಬರ್ 2019 ರಿಂದ ಮಾರ್ಚ್ 2021ರವರೆಗೆ ಕಾಲಕಾಲಕ್ಕೆ ಅತ್ಯಾಚಾರ ಎಸಗಿದ್ದಾನೆ ಎಂಬುದು ಪೊಲೀಸರ ತನಿಖೆ ಮೂಲಕ ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆ ಸಂತ್ರಸ್ತೆ ತನ್ನ ತಾಯಿಗೆ ಮೊಬೈಲ್ನಲ್ಲಿ ಸಂದೇಶ ಕಳುಹಿಸುವ ಮೂಲಕ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಬಳಿಕ ವಿಷಯ ಬೆಳಕಿಗೆ ಬಂದಿದೆ. ಈ ಘಟನೆ ಕುರಿತು ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.