ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮಂಗಳವಾರ ಕಾಶ್ಮೀರಿ ಪಂಡಿತ ಸಹೋದರರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋಪಿಯಾನ್‌ನ ಚೋಟಿಪೋರಾ ಪ್ರದೇಶದ ಸೇಬಿನ ತೋಟದಲ್ಲಿ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ ಮೃತ ವ್ಯಕ್ತಿ ಮತ್ತು ಗಾಯಾಳು ರಾಜ್ಯದ ಅಲ್ಪಸಂಖ್ಯಾತ(ಪಂಡಿತ) ಸಮುದಾಯಕ್ಕೆ ಸೇರಿದವರು. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಏತನ್ಮಧ್ಯೆ, ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ.
ಶೋಪಿಯಾನ್‌ನ ಚೋಟಿಪೋರಾ ಪ್ರದೇಶದ ಸೇಬಿನ ತೋಟದಲ್ಲಿ ನಾಗರಿಕರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ. ಇಬ್ಬರೂ ಪಂಡಿತ ಸಮುದಾಯಕ್ಕೆ ಸೇರಿದವರು. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ. @JmuKmrPolice ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಗುಂಡಿಗೆ ಬಲಿಯಾದ ವ್ಯಕ್ತಿಯನ್ನು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದ್ದು, ಗಾಯಗೊಂಡ ವ್ಯಕ್ತಿಯು ಆತನ ಸಹೋದರ ಎಂದು ತಿಳಿದು ಬಂದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಈ ಸಹೋದರರು ಕಾಶ್ಮೀರಿ ಪಂಡಿತರು ಎಂದು ಹೇಳಲಾಗಿದೆ. ಆದರೆ ಪೊಲೀಸರು ಇದನ್ನು ಇನ್ನೂ ಖಚಿತಪಡಿಸಿಲ್ಲ.
ಭಾರತೀಯ ಜನತಾ ಪಕ್ಷದ ಜಮ್ಮು ಮತ್ತು ಕಾಶ್ಮೀರ ಘಟಕದ ವಕ್ತಾರ ಅಲ್ತಾಫ್ ಠಾಕೂರ್ ಅವರು ಈ ಭಯೋತ್ಪಾದನೆಯ ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ. ಶೋಪಿಯಾನ್‌ನಲ್ಲಿ ಮುಗ್ಧರ ಮೇಲೆ ನಡೆದ ಭಯೋತ್ಪಾದನೆಯ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ. ಇದರಲ್ಲಿ ಒಬ್ಬ ಅಲ್ಪಸಂಖ್ಯಾತ ಸಮುದಾಯದ ಸದಸ್ಯ ಸುನೀಲ್ ಕುಮಾರ್ ಮೃತಪಟ್ಟಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ, ಕೊಲೆಗಾರರಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನು ಓದಿ:ಕಂದಕಕ್ಕೆ ಉರುಳಿ ಬಿದ್ದ ಸೇನಾ ವಾಹನ.. ಏಳು ಮಂದಿ ಐಟಿಬಿಪಿ ಯೋಧರು ಸಾವು