ದಾದ್ರಾ: ಕೇಂದ್ರಾಡಳಿತ ಪ್ರದೇಶ ದಾದ್ರಾ & ನಗರ ಹವೇಲಿ ಪಕ್ಷೇತರ ಸಂಸದ ಮೋಹನ್ ಡೆಲ್ಕರ್ ಸೂಸೈಡ್ ನೋಟ್ ಆಧಾರದಡಿ ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸತ್ತಿನ ಕೆಳ ಮನೆಯಲ್ಲಿ 7 ವರ್ಷಗಳ ಕಾಲ ಸದಸ್ಯರಾಗಿದ್ದ ಮೋಹನ್ ಡೆಲ್ಕರ್ (58) ಅವರ ಮೃತದೇಹ, ಸೌತ್ ಮುಂಬೈನ ಹೋಟೆಲ್ವೊಂದರಲ್ಲಿ ಫೆಬ್ರವರಿ 22ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೇ ವೇಳೆ ಸೂಸೈಡ್ ನೋಟ್ ಸಹ ಪತ್ತೆಯಾಗಿದ್ದು, ಅದು ಗುಜರಾತಿ ಭಾಷೆಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಇದೀಗ ಸೂಸೈಡ್ ನೋಟ್ಗೆ ಸಂಬಂಧಿಸಿದಂತೆ ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಕುರಿತು ನಿನ್ನೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್, ಮೋಹನ್ ಡೆಲ್ಕರ್ ಅವರ ಸಾವಿನ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಕೇಂದ್ರಾಡಳಿತ ಪ್ರದೇಶ ದಾದ್ರಾ ಹಾಗೂ ನಗರಹವೇಲಿಯ ಆಡಳಿತಗಾರ ಪ್ರಫುಲ್ ಪಟೇಲ್ ಅವರು ಡೆಲ್ಕರ್ ಅವರಿಗೆ ಬೆದರಿಕೆ ಒಡ್ಡಿರುವುದು ಸೂಸೈಡ್ ನೋಟ್ನಿಂದ ಬಹಿರಂಗವಾಗಿದೆ ಎಂದು ಹೇಳಿದ್ದರು.