ಅಯೋಧ್ಯೆ (ಉತ್ತರ ಪ್ರದೇಶ): ಇದೇ ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠಾಪನೆಗೆ ಅಯೋಧ್ಯೆ ಸಜ್ಜಾಗುತ್ತಿದ್ದು, ಐದು ವರ್ಷದ ರಾಮ ಲಲ್ಲಾನನ್ನು ಪ್ರತಿಬಿಂಬಿಸುವ 51 ಇಂಚು ಎತ್ತರದ ರಾಮನ ವಿಗ್ರಹವನ್ನು ಪ್ರಾಣ ಪ್ರತಿಷ್ಠಾಪನೆಗಾಗಿ ಆಯ್ಕೆ ಮಾಡಲಾಗಿದೆ.
ಮೈಸೂರಿನ ಶಿಲ್ಪಿಯ ಮೂರ್ತಿ ಆಯ್ಕೆ?: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ''ಭಗವಾನ್ ರಾಮ ಲಲ್ಲಾನ ವಿಗ್ರಹದ ಆಯ್ಕೆಗಾಗಿ ಈ ಹಿಂದೆ ಟ್ರಸ್ಟ್‌ನ ಸಭೆ ನಡೆಸಲಾಗಿತ್ತು. ಭವ್ಯ ದೇವಾಲಯದ ಗರ್ಭಗುಡಿಯೊಳಗೆ ಈ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಮೂವರು ಶಿಲ್ಪಿಗಳು ಸ್ಪರ್ಧೆಯಲ್ಲಿದ್ದರು. 5 ವರ್ಷದ ಬಾಲ ರಾಮನ ರೂಪದಲ್ಲಿ ಭಗವಾನ್ ರಾಮನ ಅದ್ಭುತವಾಗಿ ರಚಿಸಲಾದ 51 ಇಂಚು ಎತ್ತರದ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
''ರಾಮನ ವಿಗ್ರಹದ ಕಣ್ಣುಗಳನ್ನು ಕಮಲದ ದಳಗಳನ್ನು ಹೋಲುತ್ತವೆ. ಬಾಲ ರಾಮ ಮುಖವು ಚಂದ್ರನಂತೆ ಹೊಳೆಯುತ್ತದೆ. ತುಟಿಗಳ ಮೇಲೆ ಪ್ರಶಾಂತವಾದ ನಗುವಿದೆ. ಬಾಲ ರಾಮ ಉದ್ದನೆಯ ತೋಳುಗಳು ಗಮನ ಸೆಳೆಯುತ್ತದೆ. ರಾಮ ಲಲ್ಲಾ ಮೂರ್ತಿಯು ಒಂದು ಅಂತರ್ಗತ ದೈವಿಕ ಪ್ರಶಾಂತತೆಯ ನೋಟವನ್ನು ಹೊಂದಿದೆ. ಅತ್ಯಾಕರ್ಷಕವಾಗಿ ಕೆತ್ತಲಾದ ವಿಗ್ರಹದಲ್ಲಿ ರಾಜ ದಶರಥನ ಪುತ್ರ ಹಾಗೂ ವಿಷ್ಣುವಿನ ಅವತಾರವನ್ನು ನೋಡಬಹುದು. ರಾಮನ ಮಂದಿರದ ಗರ್ಭಗುಡಿಯಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ವಿಗ್ರಹವನ್ನು ಪ್ರತಿಷ್ಠಾಪಿಸುವ ದೇವಾಲಯದ ಭಾಗ ಸಿದ್ಧವಾಗಿದೆ ಎಂದು ಚಂಪತ್ ರೈ ಮಾಹಿತಿ ನೀಡಿದ್ದಾರೆ.
ರಾಜಸ್ಥಾನ ಮತ್ತು ಬೆಂಗಳೂರು, ಮೈಸೂರಿನ ಪ್ರಸಿದ್ಧ ಶಿಲ್ಪಿಗಳು ಕೆತ್ತಿದ ಮೂರು ವಿಗ್ರಹಗಳಲ್ಲಿ ಒಂದನ್ನು ಆಯ್ಕೆ ಮಾಡಲಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು 51 ಇಂಚಿನ ವಿಗ್ರಹ ಕೆತ್ತಿದ್ದು, ಇದೇ ವಿಗ್ರಹ ಆಯ್ಕೆ ಆಗುವ ಸಾಧ್ಯತೆ ಇದೆ.
ರಾಮ ಜನ್ಮಭೂಮಿ ಪಥ, ಸಂಕೀರ್ಣ ನಿರ್ಮಾಣ ಕಾಮಗಾರಿ ಪರಿಶೀಲನೆ: ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹಾಗೂ ಜಿಲ್ಲಾ ಉನ್ನತ ಅಧಿಕಾರಿಗಳೊಂದಿಗೆ ಇತ್ತೀಚೆಗೆ ರಾಮ ಜನ್ಮಭೂಮಿ ಪಥ ಮತ್ತು ಸಂಕೀರ್ಣದಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ''ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನ ನಗರಕ್ಕೆ ಭೇಟಿಯ ಮುನ್ನವೇ ಎಲ್ಲ ರೀತಿ ಪರಿಶೀಲನೆ ನಡೆಸಲಾಗಿತ್ತು. ಕೆಲಸವನ್ನು ತರಾತುರಿಯಲ್ಲಿ ಮಾಡಲಾಗುತ್ತಿಲ್ಲ. ಬದಲಿಗೆ ಸಾಕಷ್ಟು ಸಮಯವನ್ನು ತೆಗೆದುಕೊಂಡು ಗುಣಾತ್ಮಕವಾಗಿ ಕಾರ್ಯ ಕೈಗೊಳ್ಳಲಾಗುತ್ತಿದೆ" ಎಂದು ಮಿಶ್ರಾ ಹೇಳಿದರು. ದೇವಾಲಯದ ಅಧಿಕಾರಿಗಳ ಪ್ರಕಾರ, ಜನವರಿ 16 ರಿಂದ ಪ್ರಾರಂಭವಾಗಿ ಏಳು ದಿನಗಳ ಕಾಲ ಮಹಾಮಸ್ತಕಾಭಿಷೇಕ ನಡೆಯಲಿದೆ.
ಇದನ್ನೂ ಓದಿ: ಅಯೋಧ್ಯೆ ಹೊಸ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ನಿರ್ಧಾರ