ಮುಂಬೈ (ಮಹಾರಾಷ್ಟ್ರ): ಇಲ್ಲಿ ಲಾಕ್‌ಡೌನ್ ಜಾರಿಯಾದ ಹಿನ್ನೆಲೆ ತಮ್ಮೂರಿಗೆ ಮರಳಿದ್ದ ವಲಸೆ ಕಾರ್ಮಿಕರು ಇದೀಗ ಮತ್ತೆ ಮುಂಬೈ ಕಡೆ ಮುಖ ಮಾಡುತ್ತಿದ್ದಾರೆ. ತಮ್ಮ ತವರು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು, ಇತ್ತ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆಯಾಗುವುದಿಲ್ಲ ಎಂಬ ನಂಬಿಕೆಯೊಂದಿಗೆ ದಿನಕ್ಕೆ ಸುಮಾರು 50,000 ವಲಸಿಗರು ಮುಂಬೈಗೆ ಹಿಂತಿರುಗುತ್ತಿದ್ದಾರೆ.
ವೈರಸ್ ಉಲ್ಬಣವನ್ನು ನಿಯಂತ್ರಿಸಲು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಏಪ್ರಿಲ್ 21ರಿಂದ ವಾರಾಂತ್ಯದ ಲಾಕ್‌ಡೌನ್ ಮತ್ತು ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದು, ಇದರ ಪರಿಣಾಮ ಕೇಸ್ಗಳು ಕಡಿಮೆಯಾಗುತ್ತಿದ್ದವು. ಆದರೆ ಇದೀಗ ಬೃಹತ್ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬರುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿದೆ.
ಏಕೆಂದರೆ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ, ಮಧ್ಯಪ್ರದೇಶ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿಂದ ಮುಂಬೈಗೆ ಮರಳುತ್ತಿರುವ ಸಾಕಷ್ಟು ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೇ ಬರುತ್ತಿದ್ದಾರೆ.
ಇದನ್ನೂ ಓದಿ: 5 ವಾರಗಳ ಬಳಿಕ ಮುಂಬೈನಲ್ಲಿ ಕಡಿಮೆ ಕೋವಿಡ್ ಪ್ರಕರಣ ವರದಿ
ಈ ರಾಜ್ಯಗಳಿಂದ ಪ್ರತಿದಿನ ಒಟ್ಟು 55 ರೈಲುಗಳು ಮುಂಬೈಗೆ ಆಗಮಿಸುತ್ತಿವೆ. ಕೇಂದ್ರ ರೈಲ್ವೆ ವಿಭಾಗದ ರೈಲುಗಳಲ್ಲಿ ಸುಮಾರು 32,000 ಕಾರ್ಮಿಕರು ಹಾಗೂ ಪಶ್ಚಿಮ ರೈಲ್ವೆ ವಿಭಾಗದ ರೈಲುಗಳಲ್ಲಿ 8,000 ಮಂದಿ ಮುಂಬೈಗೆ ಪ್ರತಿದಿನ ಪ್ರಯಾಣಿಸುತ್ತಿದ್ದಾರೆ. ಇತರ ರಾಜ್ಯಗಳಿಂದ ರಸ್ತೆ ಅಥವಾ ರೈಲ್ವೆ ಮಾರ್ಗದ ಮೂಲಕ ಮುಂಬೈಗೆ ಬರುವ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡು, ಕೊರೊನಾ ಪರೀಕ್ಷೆಗೆ ಒಳಗಾಗಬೇಕೆಂದು ಮಹಾರಾಷ್ಟ್ರ ಸರ್ಕಾರ ಸ್ಪಷ್ಟವಾಗಿ ಸೂಚನೆ ನೀಡಿತ್ತು.