ಬಾರಾಬಂಕಿ(ಉತ್ತರಪ್ರದೇಶ): ವಿವಾಹಿತ ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸಿರುವ ಪೊಲೀಸರು ಉಳಿದ ನಾಲ್ವರಿಗಾಗಿ ಶೋಧ ಮುಂದುವರೆಸಿದ್ದಾರೆ.
ಬಡೋಸರೈ ಪೊಲೀಸ್ ಠಾಣೆ ವ್ಯಾಪ್ತಿಯ ವಿವಾಹಿತ ಮಹಿಳೆಯೊಬ್ಬರು 5 ಜನರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಗ್ರಾಮದ ವ್ಯಕ್ತಿಯೊಬ್ಬ ಮಹಿಳೆಗೆ ಆಮಿಷವೊಡ್ಡಿ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡು ಮಾತನಾಡಲು ಆರಂಭಿಸಿದ್ದಾನೆ. ಸೆಪ್ಟೆಂಬರ್ 17ರಂದು ಮನೆಗೆ ಬಂದು ನಿನ್ನ ಪತಿ ಕರೆದುಕೊಂಡು ಬರುವಂತೆ ತಿಳಿಸಿದ್ದಾನೆಂದು ಹೇಳಿ ಊರಿನಿಂದ ಮಹಿಳೆಯನ್ನು ಹೊರಗೆ ಕರೆದೊಯ್ದಿದ್ದಾನೆ.
ಇದನ್ನೂ ಓದಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ.. ನಾಲ್ವರು ಆರೋಪಿಗಳ ಬಂಧನ
ಬಳಿಕ ಆತ ತನ್ನ ನಾಲ್ವರು ಸಹಚರರೊಂದಿಗೆ ಸೇರಿ ಮಹಿಳೆಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದು, ಪ್ರಜ್ಞೆ ತಪ್ಪಿದಾಗ ಅಲ್ಲಿಯೇ ಆಕೆಯನ್ನ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಮೊದಲು ಗ್ರಾಮಸ್ಥರಿಗೆ ಹೆದರಿ ಮೌನವಾಗಿದ್ದ ಮಹಿಳೆ, ನಂತರ ಪತಿಗೆ ಸಂಪೂರ್ಣ ವಿಷಯ ತಿಳಿಸಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.
ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸಂತ್ರಸ್ತೆಯ ಪತಿಯು ಕೆಲಸದ ನಿಮಿತ್ತ ಬೇರೆಡೆ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.