ಹತ್ರಾಸ್(ಉತ್ತರಪ್ರದೇಶ): ಅತಿಯಾದ ವೇಗ ಅಪಾಯಕ್ಕೆ ಆಹ್ವಾನ ಎಂಬ ಮಾತಿದೆ. ಅದರಂತೆಯೇ ಚಾಲಕನೋರ್ವನ ನಿರ್ಲಕ್ಷ್ಯದಿಂದಾಗಿ 6 ಜನರ ಪ್ರಾಣ ಪಕ್ಷಿ ಹಾರಿಹೋಗಿದೆ. ವೇಗವಾಗಿ ಬಂದ ಟ್ರಕ್ವೊಂದು ಹರಿದ್ವಾರದಿಂದ ಬರುತ್ತಿದ್ದ ಭಕ್ತರ ಮೇಲೆ ಹರಿದ ಪರಿಣಾಮ 6 ಮಂದಿ ದಾರುಣವಾಗಿ ಸಾವನ್ನಪ್ಪಿ, ಓರ್ವ ಗಾಯಗೊಂಡಿರುವ ಪ್ರಕರಣ ಉತ್ತರಪ್ರದೇಶ ಹತ್ರಾಸ್‌ನಲ್ಲಿ ನಡೆದಿದೆ.
ಹತ್ರಾಸ್ ಜಿಲ್ಲೆಯ ಬಧರ್ ಗ್ರಾಮದಲ್ಲಿ ಮಧ್ಯರಾತ್ರಿ 2 ಗಂಟೆಯ ವೇಳೆ ಯಾತ್ರಿಕರ ಗುಂಪೊಂದು ನಡೆದು ಹೋಗುತ್ತಿತ್ತು. ಈ ವೇಳೆ ಯಮನಂತೆ ಬಂದ ಟ್ರಕ್ ಗುಂಪಿನ ಮೇಲೆ ಹರಿದಿದೆ. ಈ ವೇಳೆ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಸೇರಿದ ಐವರು ಯಾತ್ರಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು, ಆಗ್ರಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಬಳಿಕ ಒಬ್ಬರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಆಗ್ರಾ ವಲಯದ ಎಡಿಜಿ ರಾಜೀವ್ ಕೃಷ್ಣ ಮಾತನಾಡಿ, ಮಧ್ಯರಾತ್ರಿ 2.15 ರ ಸುಮಾರಿಗೆ ಹತ್ರಾಸ್‌ನಲ್ಲಿ ಏಳು ಯಾತ್ರಿಕರ ಮೇಲೆ ಟ್ರಕ್ ಹರಿದಿದೆ. 6 ಮಂದಿ ಯಾತ್ರಿಕರು ಸಾವನ್ನಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ. ಹರಿದ್ವಾರದಿಂದ ಮಧ್ಯಪ್ರದೇಶದ ಗ್ವಾಲಿಯರ್‌ಗೆ ತೆರಳುತ್ತಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದು, ಟ್ರಕ್ ಚಾಲಕನ ಬಗ್ಗೆ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಓದಿ: ಸಹೋದರರಿಂದಲೇ ಅಪ್ರಾಪ್ತೆ ಗರ್ಭಿಣಿ.. ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ