ಸುಕ್ಮಾ, ಛತ್ತೀಸ್ಗಡ: ಹೊಸ ವರ್ಷದ ಮೊದಲ ದಿನವೇ ಸುಕ್ಮಾ ಪೊಲೀಸರ ಮುಂದೆ ಸುಮಾರು 44 ನಕ್ಸಲರು ಶರಣಾಗಿದ್ದು, ಇದರಲ್ಲಿ 9 ಮಹಿಳಾ ನಕ್ಸಲರೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕ್ಸಲ್ ನಿರ್ಮೂಲನಾ ಕಾರ್ಯಕ್ರಮವಾದ ಪೂನಾ ನಾರ್ಕೋಮ್ ಅಭಿಯಾನವನ್ನು ಸುಕ್ಮಾ ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಈ ಅಭಿಯಾನದ ಅಡಿಯಲ್ಲಿ, ಸುಕ್ಮಾ ಪೊಲೀಸರು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲರನ್ನು ಮನವೊಲಿಸಲು ಮುಂದಾಗುತ್ತಿದ್ದಾರೆ. ಅಂದಹಾಗೆ ಪೂನಾ ನಾರ್ಕೋಮ್ ಎಂದರೆ ಹೊಸ ಮುಂಜಾನೆ, ಹೊಸ ಆರಂಭ ಎಂಬ ಅರ್ಥ ಬರುತ್ತದೆ.
ನಕ್ಸಲರ ಶರಣಾಗತಿ ಬಗ್ಗೆ ಮಾತನಾಡಿದ ಸುಕ್ಮಾ ಎಸ್ಪಿ ಸುನಿಲ್ ಶರ್ಮಾ ಹೊಸ ವರ್ಷದ ಮೊದಲ ದಿನ 300ರಿಂದ 350 ಗ್ರಾಮಸ್ಥರು ಕರಿಗುಂಡಂ ಗ್ರಾಮವನ್ನು ತಲುಪಿ ನಕ್ಸಲರನ್ನು ಪೊಲೀಸ್ ಶಿಬಿರಕ್ಕೆ ಕರೆತಂದಿದ್ದಾರೆ. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ನಕ್ಸಲರನ್ನು ಆಹ್ವಾನಿಸಲಾಗಿದೆ. ಈ ನಕ್ಸಲರು ಚಿಂತಗುಫಾ, ಚಿಂತಲ್ನಾರ್, ಭೆಜ್ಜಿ ಪ್ರದೇಶಗಳಲ್ಲಿ ವಿವಿಧ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.
ಶರಣಾದ ಎಲ್ಲಾ ನಕ್ಸಲರಿಗೆ ರಾಜ್ಯ ಸರ್ಕಾರದ ಪುನರ್ವಸತಿ ನೀತಿಯಡಿ ನೆರವು ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಸುನಿಲ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ವಿರುದ್ಧ ಭಾರತದ ಹೋರಾಟ.. 145 ಕೋಟಿ ದಾಟಿತು ವ್ಯಾಕ್ಸಿನೇಷನ್ ಹಂಚಿಕೆ