ಋಷಿಕೇಶ (ಉತ್ತರಾಖಂಡ): ಉತ್ತರಾಖಂಡದಲ್ಲಿ ಭಾರಿ ದುರಂತ ಸಂಭವಿಸಿದೆ. ಬುಧವಾರ ಋಷಿಕೇಶ-ಬದರಿನಾಥ್ ಹೆದ್ದಾರಿಯಲ್ಲಿ ನಾಲ್ವರು ಪ್ರವಾಸಿಗರಿದ್ದ ಕಾರು ಗಂಗಾ ನದಿಗೆ ಬಿದ್ದಿದ್ದು, ರಾಜ್ಯ ವಿಪತ್ತು ನಿರ್ವಹಣಾ ಸಿಬ್ಬಂದಿ (ಎಸ್‌ಡಿಆರ್‌ಎಫ್) ಮತ್ತು ಪೊಲೀಸರ ತಂಡವು ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಪೌರಿ ಗರ್ವಾಲ್ ಜಿಲ್ಲೆಯ ಋಷಿಕೇಶ-ಬದರಿನಾಥ್ ಹೆದ್ದಾರಿಯ ಕೌಡಿಯಾಲ ಬಳಿ ಈ ದುರ್ಘಟನೆ ನಡೆದಿದೆ. ಶೋಧ ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಹಾಗೂ ಕೆಲವು ಮೊಬೈಲ್ಗಳು ಪತ್ತೆಯಾಗಿವೆ. ನದಿಯಲ್ಲಿ ಕಾರು ಮುಳುಗಿರುವ ಸಾಧ್ಯತೆ ಇದ್ದು, ಉತ್ತರ ಪ್ರದೇಶದ ಮೀರತ್ ಮೂಲದ ನಾಲ್ವರು ಕಾರಿನಲ್ಲಿ ಕೇದಾರನಾಥಕ್ಕೆ ಹೋಗಿ ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಾರಿನ ಸಂಖ್ಯೆಯು ಮೀರತ್‌ನ ಪಂಕಜ್ ಶರ್ಮಾ ಮತ್ತು ಓಂ ಪ್ರಕಾಶ್ ಶರ್ಮಾ ಎಂಬುವರ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಇದೇ ಮಾಹಿತಿ ಮೇರೆಗೆ ಪಂಕಜ್ ಶರ್ಮಾ ಅವರ ಸಂಬಂಧಿಕರನ್ನು ಸಂಪರ್ಕಿಸಿದಾಗ, ಜುಲೈ 10ರಂದು ಪಂಕಜ್ ಶರ್ಮಾ, ಗುಲ್ವೀರ್ ಜೈನ್, ನಿತಿನ್ ಮತ್ತು ಸಂಜಯ್ ಕೇದಾರನಾಥಕ್ಕೆ ಹೋಗಿ ವಾಪಸಾಗುತ್ತಿದ್ದರು ಎಂದು ಖಚಿತವಾಗಿದೆ. ಈ ಸಂಬಂಧ ಎಲ್ಲ ಸಂತ್ರಸ್ತರ ಕುಟುಂಬಗಳಿಗೂ ಮಾಹಿತಿ ನೀಡಲಾಗಿದೆ. ಆದರೆ, ಕಾರು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಿವಾದಿತ ಸ್ವಾಮಿ ನಿತ್ಯಾನಂದರ 18 ಅಡಿ ಪ್ರತಿಮೆ ಸ್ಥಾಪಿಸಿದ ಭಕ್ತ!