ನಯಾಗಢ: ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ತೈಲ ಟ್ಯಾಂಕರ್ವೊಂದು ಸೇತುವೆ ಮೇಲೆ ನದಿಗೆ ಬಿದ್ದು, ಸ್ಫೋಟಗೊಂಡ ಹಿನ್ನೆಲೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಶುಕ್ರವಾರ ಬಡ ಪಾಂಡುಸಾರ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ನಯಾಗಢದ ಸನಪಾಂಡುಸರ ಗ್ರಾಮದ ಬ್ಯಾರಿ, ಸಮೀರ್, ರಘು ಮತ್ತು ದೀಪಕ್ ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ತೈಲ ಟ್ಯಾಂಕರ್ವೊಂದು ಪಾರಾದೀಪ್‌ನಿಂದ ನಯಾಗಢಕ್ಕೆ ತೆರಳುತ್ತಿದ್ದಾಗ ಬಡಪಾಂಡುಸಾರ ಸೇತುವೆ ಮೇಲಿಂದ ಕೆಳಗೆ ಬಿದ್ದಿದ್ದು, ಟ್ಯಾಂಕರ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಟ್ಯಾಂಕರ್ ಸ್ಫೋಟಗೊಂಡಿದೆ.
ಓದಿ: ಈ ರಾಜ್ಯದಲ್ಲಿ ಪದೇ ಪದೆ ಸಂಭವಿಸುತ್ತಿರುವ ಅಪಘಾತ: ನಾಲ್ಕೈದು ದಿನದಲ್ಲಿ 56ಕ್ಕೂ ಹೆಚ್ಚು ಸಾವು!
ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ವಾಹನದಲ್ಲೇ ಸಿಲುಕಿಕೊಂಡ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಆದರೆ, ಇಬ್ಬರ ಶವ ವಾಹನದಲ್ಲೇ ಸುಟ್ಟು ಕರಕಲಾಗಿದ್ದು, ಮತ್ತಿಬ್ಬರ ಶವಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದರು.
ಬೆಂಕಿ ಅನಾಹುತದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.