ಭೋಪಾಲ್: ಭೋಪಾಲ್ನ ಕಮಲಾ ನೆಹರೂ ಮಕ್ಕಳ ಆಸ್ಪತ್ರೆಯ ವಿಶೇಷ ನವಜಾತ ಶಿಶು ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕನಿಷ್ಠ ನಾಲ್ಕು ನವಜಾತ ಶಿಶುಗಳು ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಮಧ್ಯಪ್ರದೇಶ ಸರ್ಕಾರ ಆದೇಶಿಸಿದೆ.
ಅಧಿಕಾರಿಯೊಬ್ಬರ ಪ್ರಕಾರ ಐಸಿಯು ಇರುವ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಈ ಘಟನೆ ಸಂಭವಿಸಿರಬಹುದು. ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ನಾವು ಸ್ಥಳಕ್ಕೆ ಬಂದೆವು, ವಾರ್ಡ್‌ನ ಒಳಗೆ ಕತ್ತಲೆ ಆವರಿಸಿತ್ತು, ನಾವು ಮಕ್ಕಳನ್ನು ಪಕ್ಕದ ವಾರ್ಡ್‌ಗೆ ಸ್ಥಳಾಂತರಿಸಿದೆವು. ಆ ವಾರ್ಡ್ನಲ್ಲಿ 40 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯಲ್ಲಿ 36 ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಮಾಹಿತಿ ನೀಡಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟಿರುವ ನಾಲ್ಕು ಮಕ್ಕಳ ಪೋಷಕರಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ ಎಂದು ಸಾರಂಗ್ ತಿಳಿಸಿದ್ದಾರೆ.
ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ 10 ವಾಹನಗಳೊಂದಿಗೆ ಬೆಂಕಿ ನಂದಿಸಲು ಸ್ಥಳಕ್ಕೆ ಧಾವಿಸಿದೆವು ಎಂದು ಫತೇಘರ್ ಅಗ್ನಿಶಾಮಕ ಠಾಣೆಯ ಉಸ್ತುವಾರಿ ಜುಬರ್ ಖಾನ್ ಹೇಳಿದ್ದಾರೆ.
ಆಸ್ಪತ್ರೆಯ ಒಂದು ಕೋಣೆ ದಟ್ಟ ಹೊಗೆಯಿಂದ ಆವೃತಗೊಂಡಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದು, ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.