ಸಹರಾನ್‌ಪುರ (ಯುಪಿ): ಉತ್ತರ ಪ್ರದೇಶದ ಸಹರಾನ್‌ಪುರದ ಡೆಹ್ರಾಡೂನ್ ಮತ್ತು ಅಂಬಾಲಾ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯಾಹ್ನ ಕಾರೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ರಾಂಪುರ ಮಣಿಹರನ್ ಪ್ರದೇಶಕ್ಕೆ ಆಗಮಿಸಿದ ಪೊಲೀಸರು, ಗ್ಯಾಸ್ ಕಟರ್‌ನಿಂದ ಕಾರನ್ನು ಕಟ್ ಮಾಡಿ ಶವಗಳನ್ನು ಹೊರತೆಗೆದಿದ್ದಾರೆ.
ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಜ್ವಾಲಾಪುರ ಪಟ್ಟಣದ ನಿವಾಸಿಗಳಾದ ಉಮೇಶ್ ಗೋಯಲ್ (70), ಸುನಿತಾ ಗೋಯಲ್ (65), ಅಮರೇಶ್ ಜಿಂದಾಲ್ (55) ಮತ್ತು 50 ವರ್ಷದ ಗೀತಾ ಜಿಂದಾಲ್ ಮೃತ ದುರ್ದೈವಿಗಳು. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೃತರು ನೋಯ್ಡಾದಿಂದ ಹರಿದ್ವಾರಕ್ಕೆ ಕಾರಿನಲ್ಲಿ ಹಿಂತಿರುಗುತ್ತಿದ್ದರು. ರಾಂಪುರ ಮಣಿಹರನ್ ಪ್ರದೇಶದ ಚಾಲೆಂಜ್ ಗೇಟ್ ಬಳಿ ಹಿಂದಿನಿಂದ ವೇಗವಾಗಿ ಬಂದ ಕಾರು, ತನ್ನ ಮುಂದೆ ಹೊರಟಿದ್ದ ಟ್ರಕ್ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.
ತಕ್ಷಣ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಕೂಡಲೇ ರಾಂಪುರ ಮಣಿಹರನ್ ಠಾಣೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನದೊಂದಿಗೆ ಸ್ಥಳಕ್ಕೆ ಆಗಮಿಸಿ ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ, ಅಷ್ಟೊತ್ತಿಗಾಗಲೇ ಕಾರಿನಲ್ಲಿದ್ದವರೆಲ್ಲರೂ ಸುಟ್ಟು ಕರಕಲಾಗಿದ್ದರು. ಪೊಲೀಸರು ಮೃತದೇಹಗಳನ್ನು ಕಾರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಾಹಿತಿ ತಿಳಿದ ಬಳಿಕ ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ವಿಧಿವಿಜ್ಞಾನ ತನಿಖಾ ತಂಡದ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
Bus burnt: ರಸ್ತೆ ಅಪಘಾತದಿಂದ ಬಸ್ಗೆ ಬೆಂಕಿ ಹೊತ್ತಿಕೊಂಡು 25 ಪ್ರಯಾಣಿಕರು ಸಜೀವ ದಹನ.. 8 ಮಂದಿ ಪಾರಾಗಿದ್ದು ಹೇಗೆ?
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಇಂತಹದ್ದೇ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ನಾಗ್ಪುರದಿಂದ ಪುಣೆಗೆ ಹೋಗುತ್ತಿದ್ದ ಖಾಸಗಿ ಬಸ್ ಡಿವೈಡರ್ ಡಿಕ್ಕಿ ಹೊಡೆದು ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ 25 ಜನರು ಸಜೀವ ದಹನವಾಗಿದ್ದರು. ಖಾಸಗಿ ಬಸ್ ಅಪಘಾತದ ಬಳಿಕ ಸ್ಥಳದಲ್ಲಿ ಮೃತದೇಹಗಳ ರಾಶಿ ರಾಶಿ ಬಿದ್ದಿತ್ತು. ಬಸ್ಸಿನಲ್ಲಿ ಒಟ್ಟು 33 ಮಂದಿ ಪ್ರಯಾಣಿಕರಿದ್ದು, ಈ ಪೈಕಿ ಎಂಟು ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದರು. ಭೀಕರ ಅಪಘಾತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಅಲ್ಲದೇ ಮೃತರ ಸಂಬಂಧಿಕರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂಪಾಯಿಗಳ ನೆರವು ಘೋಷಿಸಿದ್ದರು.
ಇದನ್ನೂ ಓದಿ: ಅಜ್ಮೀರ್- ಜೈಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ; ಐವರು ಸಜೀವ ದಹನ, ಜಾನುವಾರುಗಳೂ ಸುಟ್ಟು ಕರಕಲು
ರಾಜಸ್ಥಾನದ ಜೈಪುರ ಜಿಲ್ಲೆಯ ದುಡು ಬಳಿಯ ಅಜ್ಮೀರ್- ಜೈಪುರ ಹೆದ್ದಾರಿಯಲ್ಲಿಯೂ ಇತ್ತೀಚೆಗೆ ಇಂತಹದ್ದೇ ಘಟನೆ ಸಂಭವಿಸಿತ್ತು. ಈ ಭೀಕರ ಅಪಘಾತದಲ್ಲಿ ಐವರು ಸಜೀವ ದಹನವಾಗಿದ್ದರು. ಅಪಘಾತ ಎಷ್ಟು ಭೀಕರವಾಗಿತ್ತು ಎಂದರೆ, ಟ್ರಕ್ ಕ್ಯಾಬಿನ್‌ನಲ್ಲಿ ಕುಳಿತಿದ್ದ ಚಾಲಕ ಮತ್ತು ಸಹಾಯಕ ಸೇರಿದಂತೆ ಐವರು ಅವಘಡದ ವೇಳೆ ಪಾರಾಗಲೂ ಸಹ ಸಾಧ್ಯವಾಗಿಲ್ಲ. ಗಂಟೆಗಳ ಪರಿಶ್ರಮದ ನಂತರ ಬೆಂಕಿ ನಿಯಂತ್ರಿಸಲಾಗಿತ್ತು. ಅವಘಡದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಟ್ರಕ್‌ನಲ್ಲಿ ಜಾನುವಾರುಗಳೂ ಸಹ ಇದ್ದವು. ಅವೂ ಸಹ ಬೆಂಕಿಯಿಂದ ಸಾವನ್ನಪ್ಪಿದ್ದವು. ಈ ಬಗ್ಗೆ ದುಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.