ನವದೆಹಲಿ : ಉತ್ತರ ಭಾರತದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇದುವರೆಗೂ ಸುಮಾರು 39ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ, ಭೂ ಕುಸಿತದಿಂದ ಅಪಾರ ಹಾನಿ ಉಂಟಾಗಿದೆ. ಉತ್ತರಾಖಂಡ್ ಮತ್ತು ಹಿಮಾಚಲ ಪ್ರದೇಶದಲ್ಲಿ ಸೇರಿದಂತೆ ವಿವಿಧೆಡೆ ಭಾರತೀಯ ಸೇನೆ ಮತ್ತು ಎನ್ಡಿಆರ್ಎಫ್ ತಂಡಗಳು ಭರದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಕಳೆದ 2 ದಿನಗಳಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ 7 ಮಂದಿ, ಉತ್ತರ ಪ್ರದೇಶದಲ್ಲಿ 3 ಮಂದಿ ಸೇರಿ ಒಟ್ಟು 39 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಸುರಿದ ಭಾರಿ ಮಳೆಗೆ ಯಮುನಾ ನದಿ ತುಂಬಿ ಹರಿಯುತ್ತಿದ್ದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಪರದಾಡುವ ಪರಿಸ್ಥಿತಿ ಇದೆ.
ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ : ಉತ್ತರ ಭಾರತದಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ 39 ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಇದರಲ್ಲಿ 14 ತಂಡಗಳು ಪಂಜಾಬ್ನಲ್ಲಿ, 12 ತಂಡಗಳು ಹಿಮಾಚಲ, 8 ಉತ್ತರಾಖಂಡ್, ಹರ್ಯಾಣದಲ್ಲಿ 5 ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಪಂಜಾಬ್ನಲ್ಲಿ 910 ವಿದ್ಯಾರ್ಥಿಗಳ ರಕ್ಷಣೆ : ಪಂಜಾಬ್ನಲ್ಲಿ ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, 910 ವಿದ್ಯಾರ್ಥಿನಿಯರು ಮತ್ತು 50 ಇತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಪಂಜಾಬ್ ಮತ್ತು ಹರ್ಯಾಣದಲ್ಲಿ ಸೇನಾಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.
ನೆರವು ನೀಡುವಂತೆ ಕೇಂದ್ರಕ್ಕೆ ಖರ್ಗೆ ಆಗ್ರಹ : ಮಳೆ ಹಾನಿಗೊಳಗಾದ ರಾಜ್ಯಗಳಿಗೆ ಪಿಎಂ ಕೇರ್ಸ್ ಅಡಿಯಲ್ಲಿ ಹೆಚ್ಚಿನ ನೆರವು ನೀಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಹಿಮಾಚಲದಲ್ಲಿ ಕಳೆದ ಎರಡು ದಿನಗಳಲ್ಲಿ 18ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೆ ಜಲವಿದ್ಯುತ್ ಯೋಜನೆ ಘಟಕಗಳು ನಾಶವಾಗಿದೆ. ಇದರಿಂದಾಗಿ ಸಾವಿರಾರು ಕೋಟಿ ರೂ ನಷ್ಟ ಉಂಟಾಗಿದೆ. ಕಳೆದ ಜೂನ್ 24ರಿಂದ ಇದುವರೆಗೆ 72 ಮಂದಿ ಮೃತಪಟ್ಟಿರುವುದಾಗಿ ಹೇಳಿದರು.
ಪ್ರಾಥಮಿಕ ಮಾಹಿತಿ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಸುಮಾರು 785 ಕೋಟಿ ರೂ ನಷ್ಟ ಉಂಟಾಗಿರುವುದಾಗಿ ಸ್ಟೇಟ್ ಎಮರ್ಜೆನ್ಸಿ ಆಪರೇಷನ್ ಸೆಂಟರ್ ಮಾಹಿತಿ ನೀಡಿದೆ. ಇಲ್ಲಿ ಸುಮಾರು 800 ರಸ್ತೆಗಳು ಬಂದ್ ಆಗಿದೆ. ಹಿಮಾಚಲ ಸಾರಿಗೆ ಸಂಸ್ಥೆ ಮಾಹಿತಿ ಪ್ರಕಾರ, ಒಟ್ಟು 1255 ರಸ್ತೆ ಮಾರ್ಗದಲ್ಲಿ ಬಸ್ ಸಂಚಾರ ಇಲ್ಲವಾಗಿದೆ. ಸುಮಾರು 576 ಬಸ್ಗಳು ವಿವಿಧೆಡೆ ಸಿಲುಕಿರುವುದಾಗಿ ಮಾಹಿತಿ ನೀಡಿದೆ. ಶಿಮ್ಲಾದ ಥಿಯಾಂಗ್ನಲ್ಲಿ ಮನೆ ಕುಸಿತಗೊಂಡು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ರಸ್ತೆ ಸಂಚಾರ ಬಂದ್ : ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದೆಲ್ಲೆಡೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮಳೆಯಿಂದಾಗಿ ಶಿಮ್ಲಾ- ಕಲ್ಕಾ ರೈಲು ಸೇವೆ ಸ್ಥಗಿತಗೊಂಡಿದೆ. ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ಶೋಘಿ ಬಳಿ ಶಿಮ್ಲಾ-ಕಲ್ಕಾ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ರಸ್ತೆ ಸಂಚಾರದಲ್ಲಿ ತೊಡಕು ಉಂಟಾಗಿದೆ. 120ಕ್ಕೂ ಅಧಿಕ ರಸ್ತೆಗಳು ಬಂದ್ ಆಗಿದ್ದು, 484 ನೀರಿನ ಯೋಜನೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನದಲ್ಲೂ ಮಳೆಯಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ರಾಜಸ್ಥಾನದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರಾಖಂಡ್ನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ ಮತ್ತು ಇತರೆ ರಸ್ತೆಗಳು ಹಾನಿಗೊಳಗಾಗಿದೆ.
ಹಿಮಾಚಲದಲ್ಲಿ ಮುಂದುವರೆದ ಭಾರಿ ಮಳೆ : ಭಾರಿ ಮಳೆಗೆ ಹಿಮಾಚಲ ಪ್ರದೇಶಾದ್ಯಂತ ಭೂ ಕುಸಿತ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭೂ ಕುಸಿತದಿಂದಾಗಿ ರಸ್ತೆಗಳು ಮುಚ್ಚಲ್ಪಟ್ಟಿದ್ದು, ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಭಾರಿ ಮಳೆಗೆ ಇಲ್ಲಿನ ನದಿಗಳಲ್ಲಿ ಪ್ರವಾಹ ಉಂಟಾಗಿದ್ದು, ಹಲವೆಡೆ ಸೇತುವೆಗಳು ನದಿಯಲ್ಲಿ ಕೊಚ್ಚಿಹೋಗಿದೆ. ಅಲ್ಲದೆ ರಾಜ್ಯಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಕಳೆದ 48 ಗಂಟೆಗಳಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 3000ರಿಂದ 4000 ಸಾವಿರ ಕೋಟಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಇಲ್ಲಿಗೆ ಆಗಮಿಸಿದ್ದ ಪ್ರವಾಸಿಗರು ಹಲವೆಡೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಕಳೆದ 50 ವರ್ಷಗಳಿಂದ ಇಂತಹ ಭಾರಿ ಮಳೆಯನ್ನು ರಾಜ್ಯ ಕಂಡಿರಲಿಲ್ಲ. ರಾಜ್ಯದ ಪರಿಸ್ಥಿತಿಯನ್ನು "ರಾಷ್ಟ್ರೀಯ ವಿಪತ್ತು" ಎಂದು ಘೋಷಿಸಲು ಕೇಂದ್ರವನ್ನು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗಳ ಕುರಿತು ಸಿಎಂ ಸುಖು ಜೊತೆ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಕ್ಕಟ್ಟಿನಿಂದ ಹೊರಬರಲು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಮಳೆಯಿಂದಾಗಿ ಹೆಚ್ಚು ಹಾನಿ ಸಂಭವಿಸಿದೆ. ಇಲ್ಲಿನ ಬಿಯಾಸ್ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ ಟ್ರಕ್ ಕೊಚ್ಚಿಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು. ಮಂಡಿ ಜಿಲ್ಲೆಯಲ್ಲಿ ಪಂಚವಕ್ತ್ರ ದೇವಾಲಯವು ಬಿಯಾಸ್ ನದಿಯಲ್ಲಿ ಮುಳುಗಡೆಯಾಗಿದೆ. ರಾಜ್ಯದಲ್ಲಿ ಉಂಟಾದ ಪ್ರವಾಹದಿಂದಾಗಿ ಹಲವು ಮನೆಗಳು ಕೊಚ್ಚಿ ಹೋಗಿದ್ದು, ಕನಿಷ್ಠ 12 ದೊಡ್ಡ ಸೇತುವೆಗಳು ಹಾನಿಗೊಳಗಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಜೈ ರಾಮ್ ಠಾಕೂರ್ ಹೇಳಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸುಖು : ಪರಿಸ್ಥಿತಿಯನ್ನು ಅವಲೋಕಿಸಿದ ಸಿಎಂ ಸುಖು ಅವರು, ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಇದೇ ವೇಳೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ರಾಜ್ಯದಲ್ಲಿ ಉಂಟಾಗಿರುವ ಪ್ರಕೃತಿ ಪ್ರಕೋಪದಿಂದಾಗಿ ರಸ್ತೆಗಳು, ವಿದ್ಯುತ್ ಪರಿವರ್ತಕಗಳು, ಉಪ ವಿದ್ಯುತ್ ಕೇಂದ್ರಗಳು ಮತ್ತು ಹಲವಾರು ನೀರು ಸರಬರಾಜು ಯೋಜನೆಗಳಿಗೆ ವ್ಯಾಪಕ ಹಾನಿ ಉಂಟಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 10 ದಿನಗಳ ಕಾಲ ಎಲ್ಲ ನಾಗರಿಕರು ಜಾಗರೂಕರಾಗಿರಲು ಹೇಳಿದರು. ಸಂತ್ರಸ್ತ ವ್ಯಕ್ತಿಗಳಿಗೆ ಎಲ್ಲ ಸಹಾಯವನ್ನು ಒದಗಿಸುವಂತೆ ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಲಾಹೌಲ್-ಸ್ಪಿಟಿ ಮತ್ತು ಕುಲು ಜಿಲ್ಲೆಗಳಲ್ಲಿ ಸಿಲುಕಿರುವ ಸುಮಾರು 300 ಪ್ರವಾಸಿಗರು ಮತ್ತು ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಪ್ರವಾಹದಿಂದಾಗಿ ರಾಜ್ಯದಲ್ಲಿ ಸಿಲುಕಿರುವ ಇತರ ರಾಜ್ಯದ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ. ಮಳೆಯಿಂದ ಹಾನಿಯಾಗಿರುವ ರಸ್ತೆಯನ್ನು ತ್ವರಿತವಾಗಿ ಸರಿಪಡಿಸಲು 4 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ನಾಲ್ವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದರಿಂದ ಶ್ರೀ ಖಂಡ್ ಮಹಾದೇವ್ ಯಾತ್ರೆಯನ್ನು ನಿಲ್ಲಿಸಲಾಗಿದೆ.
ದಾಖಲೆಯ ಮಳೆ : ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ 92 ಮಿಮೀ ಮಳೆ ದಾಖಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಸಾಮಾನ್ಯವಾಗಿ ಜೂನ್ 1 ರಿಂದ ಜುಲೈ 10ರ ನಡುವೆ 168.9 ಮಿಮೀ ಮಳೆಯಾಗುತ್ತದೆ. ಆದರೆ ಈ ಬಾರಿ 360.2 ಮಿಮೀ ಮಳೆ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಶೇ.113ಕ್ಕೂ ಹೆಚ್ಚು ಎಂದು ಹೇಳಲಾಗಿದೆ. ಜುಲೈ 1 ರಿಂದ ಜುಲೈ 10ರ ನಡುವೆ ವಾಡಿಕೆಯಂತೆ ರಾಜ್ಯದಲ್ಲಿ 68.7 ಮಿ.ಮೀ ಮಳೆ ಆಗಬೇಕಿತ್ತು. ಆದರೆ 239.3 ಮಿ.ಮೀ ಮಳೆ ದಾಖಲಾಗಿದ್ದು, ವಾಡಿಕೆಗಿಂತ ಶೇ.253 ರಷ್ಟು ಹೆಚ್ಚು ಮಳೆಯಾಗಿದೆ.
"ನಾನು ಹಿಮಾಚಲದ ಜನರಿಗೆ ಮತ್ತೊಮ್ಮೆ ವಿನಂತಿಸುತ್ತೇನೆ, ದಯವಿಟ್ಟು ಮುಂದಿನ 24 ಗಂಟೆಗಳ ಕಾಲ ನಿಮ್ಮ ಮನೆಯೊಳಗೇ ಇರಿ. ಏಕೆಂದರೆ ಮುಂದಿನ 24 ಗಂಟೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆಯಿದೆ" ಎಂದು ಸಿಎಂ ಸುಖು ಅವರು ಹೇಳಿದ್ದಾರೆ. "ನಾವು ಮೂರು ಸಹಾಯವಾಣಿ ಸಂಖ್ಯೆಗಳನ್ನು 1100, 1070 ಮತ್ತು 1077 ಅನ್ನು ನೀಡಿದ್ದೇವೆ. ಯಾವುದೇ ತುರ್ತು ಸಂದರ್ಭದಲ್ಲಿ ನೀವು ಈ ಸಂಖ್ಯೆಗಳಿಗೆ ಕರೆ ಮಾಡಬಹುದು. ನಾನು 24 ಗಂಟೆಯೂ ಲಭ್ಯವಿರುತ್ತೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹರಿಯಾಣದ ಶಾಲಾ ಕಟ್ಟಡಕ್ಕೆ ಜಲ ದಿಗ್ಬಂಧನ; ಹಗ್ಗದ ಸಹಾಯದಿಂದ 730 ವಿದ್ಯಾರ್ಥಿನಿಯರ ರಕ್ಷಣೆ- ವಿಡಿಯೋ